

ಲಿಂಗದಹಳ್ಳಿ: ತಿಗಡ ಮತ್ತು ನಂದಿಬಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಶಾಂತಿ, ಸೌಹಾರ್ದತೆಗೆ ಆದ್ಯತೆ ನೀಡುವುದರಿಂದ ಈ ಭಾಗದ ಹಿಂದು, ಮುಸ್ಲಿಂ,ಕ್ರೈಸ್ತರು ಸಹೋದದರಂತೆ ಬಾಳುತ್ತಿದ್ದರೆ ಎಂದು ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್ ಹೇಳಿದರು.
ನಂದಿಬಟ್ಲು ಕಾಲನಿ ಗ್ರಾಮದಲ್ಲಿ ನಡೆದ ಹಜರತ್ ಸೈಯದ್ ಅಬ್ದುಲ್ಲಾ ಷಾ ಖಾದ್ರಿ ದರ್ಗಾ ಉದ್ಘಾಟನೆ ಮತ್ತು ಸಂದಲ್ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಿವರಾತ್ರಿ ಹಬ್ಬದಲ್ಲಿ ಎಲ್ಲ ಸಮುದಾಯದವರು ಸೇರಿ ಶಿವನ ಆರಾಧನೆ ಮಾಡುವುದು ದರ್ಗಾಗಳ ಸಂದಲ್ ಉರುಸ್ ಕಾರ್ಯಕ್ರಮದಲ್ಲಿ ಎಲ್ಲರೂ ಒಂದಾಗಿ ಭಾಗಿಯಾಗಿರುತ್ತಿರುವುದನ್ನು ನೋಡಿದರೆ ಜಾತ್ಯಾತೀತ ಭಾರತದ ಕಲ್ಪನೆ ಇಲ್ಲಿ ಸಕಾರವಾಗಿದೆ ಎಂದರು.
ಜಿ.ಹೆಚ್.ಶ್ರೀನಿವಾಸ್ ಮೊದಲ ಬಾರಿ ಶಾಸಕರಾದಾಗ ಈ ದರ್ಗಾದ ಅಭಿವೃದ್ಧಿಗೆ ಸರ್ಕಾರದಿಂದ 5 ಲಕ್ಷ ರೂ. ಅನುದಾನ ನೀಡಿದ್ದರು. ಮುಂದಿನ ದಿನಗಳಲ್ಲಿ ದರ್ಗಾದ ಮುಂದಿನ ಕೆಲಸ ಕಾರ್ಯಗಳಿಗೆ 2.5 ಲಕ್ಷ ರೂ. ಅನುದಾನ ನೀಡಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಮಾತನಾಡಿ, ಈ ಭಾಗದಲ್ಲಿ ಎಲ್ಲ ಸಮುದಾಯದ ಜನರು ಸಹೋದರರಂತೆ ವಾಸಿಸುತ್ತಿದ್ದಾರೆ ಎಂದರು.
ಸಂದಲ್ ಉರುಸ್ ಕಾರ್ಯಕ್ರಮದಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಮಹಮ್ಮದ್‌ಅಕ್ಬರ್, ತಾಲೂಕು ಬಂಜಾರ ಸಮಿತಿ ಗೌರವಾಧ್ಯಕ್ಷ ಆರ್.ಸತ್ಯಪ್ಪ , ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಜೆ.ಭದ್ರೇಗೌಡ, ಇಸ್ಮಾಯಿಲ್, ಅಬ್ದುಲ್ ಗಾರ್, ನೌಶಾದ್, ರೀದ್, ಸುದೀಪ್ ಇದ್ದರು.