

ನಂದಗುಡಿ: ಹಿಂದು ಧರ್ಮದಲ್ಲಿ ದೇವರ ಆರಾಧನೆಗೆ ವಿಶಿಷ್ಟ ಪರಂಪರೆ ಇದೆ. ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ದೊರೆಯುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಂದಗುಡಿ ಹೋಬಳಿಯ ಕೆ.ಸತ್ಯವಾರ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಸೊಮವಾರ 15ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ತಿರುಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ನಮ್ಮ ಹಿರಿಯರು ದೇವಾಲಯಗಳನ್ನು ಸ್ಥಾಪನೆ ಮಾಡಿ, ಜನರಲ್ಲಿ ಭಕ್ತಿ- ಭಾವ, ಆಚಾರ-ವಿಚಾರ, ಸಹಬಾಳ್ವೆ, ಏಕತೆಯನ್ನು ಮೂಡಿಸುವ ಸಲುವಾಗಿ ಕಾಲ-ಕಾಲಕ್ಕೆ ಒಟ್ಟಾಗಿ ಸೇರಿ ದೇವತಾ ಕಾರ್ಯಗಳನ್ನು ಮಾಡುತ್ತಿದ್ದರು.ಆ ಮೂಲಕ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆ ಬೆಳೆಯುವಂತಹ ಸಂಸ್ಕಾರವನ್ನು ರೂಢಿಸಿಕೊಂಡು ಬಂದಿದ್ದಾರೆ ಎಂದರು.
ಮನುಷ್ಯನ ನಡೆ-ನುಡಿ ಶುದ್ಧವಾಗಿದ್ದಾಗ ಶ್ರೇಷ್ಠನಾಗುತ್ತಾನೆ. ದೇವರ ಅನುಗ್ರಹ ಪಡೆಯಲು ನಮ್ಮ ಆಚಾರ ವಿಚಾರಗಳೂ ಶುದ್ಧಿಯಾಗಬೇಕು. ಜನರು ದೈವಿಕ ಶಕ್ತಿಯ ಬಗ್ಗೆ ಶ್ರದ್ಧಾ- ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಸಂತೋಷವನ್ನು ನಾಲ್ಕಾರು ಜನರಿಗೆ ಹಂಚುವುದೇ ದೇವರ ಪೂಜೆ, ಮನುಷ್ಯ ಭಗವಂತನನ್ನು ಕಾಣಲು ದೇವಸ್ಥಾನಗಳು ಸ್ಥಾಪನೆಯಾಗಿದೆ ಎಂದರು. ಗಂಗೆಪೂಜೆ, ಗಣಪತಿ ಪೂಜೆ, ಕಲಶ ಪೂಜೆ, ನವಗ್ರಹ ಪೂಜೆ, ಅಷ್ಟಾಕ್ಷರಿ ಹೋಮ, ಮಹಾ ಸುದರ್ಶನ ಹೋಮ ಸೇರಿದಂತೆ ವಿವಿಧ ಹೋಮ, ಪೂರ್ಣಾಹುತಿ, ರಾಜೋಪಚಾರ, ಮಂಗಳಾರತಿ ನಡೆಯಿತು. ಅನ್ನಸಂತರ್ಪಣೆ ನಡೆಯಿತು. ಗ್ರಾಪಂ ಸದಸ್ಯರಾದ ಮಂಜುಳಾ ಎಸ್.ಪಿ.ರಾಜಣ್ಣ, ದೇವರಾಜು, ಎಸ್‌ಎಫ್‌ಸಿಎಸ್ ನಿರ್ದೇಶಕ ದೊಡ್ಡಮನೆ ರಮೇಶ್, ಮುಖಂಡರಾದ ಎಸ್.ಪಿ ಕೃಷ್ಣಪ್ಪ, ಎಸ್‌ಟಿ ಮುನಿರಾಜು, ರಘುನಾಥ್, ಲಕ್ಷ್ಮೀಶ್, ಎಸ್.ಪಿ. ವಿಜಯಕುಮಾರ್, ಎಸ್.ಪಿ. ಶ್ರೀನಿವಾಸ್, ಜಿ.ಎಂ. ಆಂಜಿನಪ್ಪ, ಎಸ್.ಮುನಿರಾಜು, ಅರ್ಚಕ ಸೀನಪ್ಪ, ಕರಪನಹಳ್ಳಿ ಪಿ. ನಾರಾಯಣಪ್ಪ ಇದ್ದರು.