

ಲಕ್ಷ್ಮೇಶ್ವರ: ದೀಪ ಮನುಕುಲದ ಅಜ್ಞಾನ ಮತ್ತು ಅಂಧಕಾರ ಹೋಗಲಾಡಿಸಿ ಧರ್ಮದ ಬೆಳಕಿನೆಡೆಗೆ ಹಾಗೂ ಸನ್ಮಾರ್ಗ ತೋರಿಸುವ ಶಕ್ತಿಯಾಗಿದೆ. ಧಾರ್ಮಿಕ ಕಾರ್ಯಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುತ್ತವೆ ಎಂದು ಕಾಗಿನೆಲೆ ಕನಕಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಮ್ಯಾಗೇರಿ ಓಣಿಯ ಬೀರೇಶ್ವರ ಟ್ರಸ್ಟ್ ಕಮಿಟಿಯಿಂದ ಗುರುವಾರ ಹಮ್ಮಿಕೊಂಡಿದ್ದ 11ನೇ ವರ್ಷದ ಕಾರ್ತಿಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕತ್ತಲೆ ಎಂಬ ಅಜ್ಞಾನ ಕಳೆದು ಸುಜ್ಞಾನದ ಬೆಳಕು ಮೂಡಿಸುವುದು ಕಾರ್ತಿಕೋತ್ಸವದ ಉದ್ದೇಶವಾಗಿದೆ. ಈ ಜಗತ್ತಿನಲ್ಲಿ ಜನ್ಮತಾಳಿದ ಮೇಲೆ ನಮ್ಮನ್ನು ರಕ್ಷಣೆ ಮಾಡುವುದು ನಮ್ಮ ಹಣ, ಸಂಪತ್ತು, ಜಾತಿ, ಸಮಾಜವಲ್ಲ. ನಮ್ಮನ್ನು ರಕ್ಷಣೆ ಮಾಡುವುದು ಹಾಗೂ ಮೋಕ್ಷದೆಡೆಗೆ ಕರೆದುಕೊಂಡು ಹೋಗುವುದು ಭಗವಂತನ ನಾಮಸ್ಮರಣೆ, ಧರ್ಮಮಾರ್ಗದ ನಡೆಯಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಮೌಢ್ಯಗಳಿಗೆ ಗಮನ ನೀಡದೆ, ಶಿಕ್ಷಣ ಕ್ರೀಡೆ, ಸಂಗೀತ, ಜಾನಪದ ಕಲೆ ರೂಢಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಚಟುವಟಿಕೆ ಹೆಚ್ಚು ಹೆಚ್ಚು ನಡೆಯುವಂತಾದರೆ, ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ಹುಲ್ಲೂರು ಅಮೋಘಿಮಠದ ಸಿದ್ದಯ್ಯಸ್ವಾಮಿಗಳು ವಹಿಸಿದ್ದರು. ಬೀರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ಕೋರಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಪಿಎಸ್‌ಐ ನಾಗರಾಜ ಗಡದ, ಮುಖಂಡರಾದ ನಿಂಗಪ್ಪ ಬನ್ನಿ, ಶೇಖಣ್ಣ ಕಾಳೆ, ವೀರೇಂದ್ರ ಪಾಟೀಲ, ನೀಲಪ್ಪ ಶೇರಸೂರಿ, ಗಂಗಪ್ಪ ದುರಗಣ್ಣವರ, ನೀಲಪ್ಪ ಪೂಜಾರ ಮಂಜುನಾಥ ಘಂಟಿ, ಭಾಗ್ಯಶ್ರೀ ಬಾಬಣ್ಣ, ಜಯಕ್ಕ ಕಳ್ಳಿ, ನಾಗರಾಜ ಮಡಿವಾಳರ, ಅಣ್ಣಪ್ಪ ರಾಮಗೇರಿ, ಮಂಜುನಾಥ. ಕೊಕ್ಕರಗುಂದಿ, ಶಿವಯೋಗಿ ಗಡ್ಡದೇವರಮಠ, ಯಲ್ಲಪ್ಪ ಸೂರಣಗಿ ಅಮರಪ್ಪ ಗುಡಗುಂಟಿ, ಮಲ್ಲಪ್ಪ ಗುಡಗುಂಟಿ, ಶಿದ್ದಪ್ಪ ಪೂಜಾರ, ಪುಟ್ಟಪ್ಪ ಕೋರಿ ಇತರರು ಇದ್ದರು
ನ್ಯಾಯವಾದಿ ಮಹೇಶ ಹಾರೋಗೇರಿ ಉಪನ್ಯಾಸ ನೀಡಿದರು. ವಿ.ಜಿ. ಪಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಮೊದಲು ಕಾಗಿನೆಲೆ ಶ್ರೀಗಳನ್ನು ಹಾವಳಿ ಆಂಜನೇಯ ದೇವಸ್ಥಾನದಿಂದ ಪೂರ್ಣ ಕುಂಭ ಹೊತ್ತ ಮಹಿಳೆಯರು ಡೊಳ್ಳಿನ ವಾದ್ಯಗಳಿಂದ ಆದ್ದೂರಿ ಸ್ವಾಗತದಿಂದ ಬೀರೇಶ್ವರ ದೇವಸ್ಥಾನ ಕರೆತರಲಾಯಿತು. ಬೀರೇಶ್ವರ ದೇವಸ್ಥಾನ ಕಾರ್ತಿಕೋತ್ಸವಕ್ಕೆ ಕಾಗಿನೆಲೆ ಶ್ರೀಗಳು ಚಾಲನೆ ನೀಡಿದರು. ಕಾರ್ಯಕ್ರಮದ ನಂತರ ರಸಮಂಜರಿ ಕಾರ್ಯಕ್ರಮ ಜರುಗಿತು. ಈಶ್ವರ ಮೆಡ್ಲೆರಿ, ನಾಗರಾಜ ಶಿಗ್ಲಿ, ನೀಲಪ್ಪ ಪಡಗೇರಿ, ಮಲ್ಲೇಶ ಗೊಜಗೋಜಿ ಕಾರ್ಯಕ್ರಮ ನಿರ್ವಹಿಸಿದರು. ಕಾಗಿನೆಲೆ ಕನಕಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳಿಗೆ ತುಲಾಭಾರ ನೆರವೇರಿಸಲಾಯಿತು.