ರೇಣುಕಾಚಾರ್ಯರ ವಿಚಾರಧಾರೆಯಿಂದ ಶಾಂತಿ, ನೆಮ್ಮದಿ ಲಭ್ಯ; ಡಾ.ವೀರಸೋಮೇಶ್ವರ ಜಗದ್ಗುರುಗಳ ಅಭಿಮತ

renuka
Published on

ಬೆಂಗಳೂರು: ಮನುಷ್ಯನ ಪರಿಪೂರ್ಣತೆಗೆ ಅರಿವು ,ಆದರ್ಶಗಳನ್ನು ಬೋಧಿಸಿದ ಶ್ರೀಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಶಾಂತಿ ನೆಮ್ಮದಿಯ ಬದುಕಿಗೆ ಮೂಲ ಸೆಲೆಯಾಗಿವೆ ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪಾಯಿಸಿದ್ದಾರೆ. ಶನಿವಾರ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಭಾರತೀಯ ಉತ್ಕೃಷ್ಟ ಸಂಸ್ಕೃತಿಯನ್ನು ನಮ್ಮ ಹಿರಿಯರು ಉಳಿಸಿ ಬೆಳೆಸಿದ್ದಾರೆ. ಧರ್ಮ ಮತ್ತು ಆಚರಣೆ ಬೇರೆ ಬೇರೆಯಾದರೂ ತಲುಪುವ ಗುರಿ ಒಂದೇ ಆಗಿದೆ. ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಬೋಧಿಸಿದ ಶಿವಾದ್ವೈತ ಸಿದ್ಧಾಂತಗಳ ಅರಿವು ಮಾನವ ಜೀವನದ ಸುಖ ಶಾಂತಿಯ ಬದುಕಿಗೆ ಗಂಗೋತ್ರಿಯಾಗಿದೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ ಶ್ರೇಯಸ್ಸು ಅವರದು ಎಂದು ಜಗದ್ಗುರುಗಳು ವಿವರಿಸಿದರು. ಕಾರ್ಯಕ್ರಮವನ್ನು ಶಾಸಕ ಹಾಗೂ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ್ ಉದ್ಘಾಟಿಸಿದರು. ಮಹಲಿಂಗಪುರದ ಕಲಾವಿದ ವಿನಾಯಕ ಚಿಕ್ಕೋಡಿ ರಚಿಸಿದ ಜಗದ್ಗುರು ರೇಣುಕಾಚಾರ್ಯರ ನವಲೀಲೆಯ ರೇಖಾಚಿತ್ರಗಳನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅನಾವರಣಗೊಳಿಸಿದರು. ಪ್ರೊ. ಎಚ್.ವಿ.ಪಂಚಾಕ್ಷರಯ್ಯ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಸ್‌ಜೆಆರ್ ಸಂಸ್ಥೆಯ ಅಧ್ಯಕ್ಷ ಯು.ಎಂ.ಬಸವರಾಜ, ಕಾರ್ಯದರ್ಶಿ ಪ್ರಭುದೇವ ಕಲ್ಮಠ ಮತ್ತಿತರರು ಉಪಸ್ಥಿತರಿದ್ದರು.

ಮಹಾಸಭೆ ನಿಲುವಿಗೆ ಬೆಂಬಲ:

ಸರ್ಕಾರ ಬಿಡುಗಡೆ ಮಾಡಲು ಹೊರಟಿರುವ ಕಾಂತರಾಜ ವರದಿಯಲ್ಲಿ ವ್ಯವಸ್ಥಿತವಾಗಿ ವೀರಶೈವ ಲಿಂಗಾಯತ ಸಮಾಜದ ಶಕ್ತಿ ಕುಂದಿಸುವ ಯತ್ನ ನಡೆದಿದೆ ಎಂದು ರಂಭಾಪುರಿ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಳಪಂಗಡಗಳನ್ನು ವಿಂಗಡಿಸಿ ಮಾಡಿರುವ ಈ ಸಮೀಕ್ಷೆಯನ್ನು ಕೈಬಿಡಬೇಕೆಂದು ಈಗಾಗಲೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಮತ್ತು ರಾಜ್ಯಾಧ್ಯಕ್ಷ ಶಂಕರ ಬಿದರಿ ಸರ್ಕಾರವನ್ನು ಒತ್ತಾಯಿಸಿದ್ದು, ಮಹಾಸಭೆಯಿಂದ ಪ್ರತ್ಯೇಕ ಗಣತಿ ಮಾಡುವ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನಂ.1 ಸ್ಥಾನದಲ್ಲಿರುವ ವೀರಶೈವ ಲಿಂಗಾಯತರ ಸಂಖ್ಯೆ ತಪ್ಪಾಗಿ ನಮೂದಿಸಲಾಗಿದೆ. ಒಳಪಂಗಡಗಳನ್ನು ಒಡೆದು ಅಂಖ್ಯೆ-ಸಂಖ್ಯೆಯನ್ನು ಕಡಿಮೆ ತೋರಿಸಿರುವ ವರದಿಯನ್ನು ಕೈಬಿಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ. ಈ ನಿಟ್ಟಿನಲ್ಲಿ ಸಮಾಜವನ್ನು ಒಂದುಗೂಡಿಸಲು ರಂಭಾಪುರಿ ಜಗದ್ಗುರುಗಳು ಮುಂದಾಳತ್ವ ವಹಿಸಬೇಕು. - ಜಿ.ಎಸ್.ಪಾಟೀಲ್, ಶಾಸಕರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net