

ಮಂಡ್ಯ: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಿಡಿಒಗಳು ಸ್ಥಳೀಯ ಮಟ್ಟದಲ್ಲಿ ಕೆಲಸವನ್ನು ಮಾಡುತ್ತಿದ್ದು, ಯಾವುದೇ ದೂರುಗಳು ಬರದಂತೆ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪಿಡಿಒಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾಡುವ ಕೆಲಸದ ಬಗ್ಗೆ ಆತ್ಮತೃಪ್ತಿ ಇರಬೇಕು. ಕೆಲವು ಪಿಡಿಒಗಳು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಅವರ ಅರ್ಹತೆ ಮತ್ತು ಸಾಮರ್ಥ್ಯವನ್ನು ಗುರುತಿಸಲಾಗಿದೆ. 6 ತಿಂಗಳಿಗೆ ಒಂದು ಬಾರಿ ಪಿಡಿಒ ಆರೋಗ್ಯ ತಪಾಸಣೆ ಮತ್ತು ಕುಟುಂಬದವರ ಸಮ್ಮುಖದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದಕ್ಕೆ ಪ್ರಶಸ್ತಿ ನೀಡಲಾಗುವುದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಸಿಬ್ಬಂದಿ ಆಡಳಿತದಲ್ಲಿನ ಕುಂದುಕೊರತೆಗಳ ಬಗ್ಗೆ ನಿರ್ಭಯ ಮತ್ತು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಕ್ಕಂತೆ ಮಾಹಿತಿ ನೀಡಬಹುದು. ತಾಪಂ ಇಒಗಳು ತಿಂಗಳಲ್ಲಿ ಒಂದು ಬಾರಿ ಪಿಡಿಒಗಳ ಕುಂದು ಕೊರತೆ ಬಗ್ಗೆ 2 ರಿಂದ 3 ಗಂಟೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಕ್ರಮವಹಿಸಬೇಕು. ಪಿಡಿಒಗಳನ್ನು ವೈಯಕ್ತಿಕವಾಗಿ ಗುರಿಯನ್ನಿಟ್ಟುಕೊಂಡು ಜನರಿಂದ ದೂರುಗಳು ಬಂದಲ್ಲಿ ತಾಲೂಕು ಸಂಘದವರು ಬಗೆಹರಿಸಲು ಕ್ರಮವಹಿಸಬೇಕು. ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬೇಕು ಎಂದರು.
ಪ್ರತಿ ಸೋಮವಾರ ಹಾಗೂ ಗುರುವಾರ ಮಧ್ಯಾಹ್ನ 3 ರಿಂದ 4 ಗಂಟೆವರೆಗೆ ತಾಲೂಕಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಜಿಲ್ಲಾ ಕೇಂದ್ರಸ್ಥಾನದಲ್ಲಿದ್ದು, ಸಾರ್ವಜನಿಕರ ಕುಂದು ಕೊರತೆ ಆಲಿಸಬೇಕು. ಗ್ರಾಪಂನಲ್ಲಿ ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಬಹಳಷ್ಟು ದೂರು ಬರುತ್ತಿವೆ. 60:40 ಪ್ರಕಾರ ಕ್ರಿಯಾ ಯೋಜನೆ ಮಾಡಬೇಕು. ಗ್ರಾ.ಪಂ ಸಾಮಾನ್ಯ ಸಭೆ ನಡಾವಳಿಯಲ್ಲಿ ನಿಯಮಾನುಸಾರ ವೆಚ್ಚ ಮಾಡುವ ಬಗ್ಗೆ ಕ್ರಮ ವಹಿಸಬೇಕು. ಕೆ.ಟಿ.ಪಿ.ಪಿ. ನಿಯಮ ಹಾಗೂ ಆರ್ಥಿಕ ಸಂಹಿತೆ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್‌ಬಾಬು ಮಾತನಾಡಿ, ಜಿಪಂ ಸಿಇಒ ಪಿಡಿಒಗಳ ಕಾರ್ಯನಿರ್ವಹಣಾ ವರದಿ ಸೇರಿದಂತೆ ಅವರ ಪ್ರತಿ ದಿನದ ಕೆಲಸದ ನಿರ್ವಹಣೆಯಲ್ಲಿ ಇರುವ ತೊಂದರೆ ಪರಿಹರಿಸಲು ಸಭೆ ಆಯೋಜಿಸಿರುವುದು ಶ್ಲಾಘನೀಯ. ಪ್ರತಿ ಮಾಹೆ 5ನೇ ತಾರೀಖಿನೊಳಗೆ ವೇತನ, ಪಿಡಿಒಗಳ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ತಾಲೂಕಿನಲ್ಲಿ ಪ್ರತಿ ಮಾಹೆ ವೇತನ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿಗಳಾದ ಟಿ.ಲಕ್ಷ್ಮೀ, ಬಾಬು, ಮುಖ್ಯ ಯೋಜನಾಧಿಕಾರಿ ಧನುಷ್ ಇತರರಿದ್ದರು.