ಬೇಡಿಕೆ ಈಡೇರಿಕೆಗೆ ಪಿಡಿಒಗಳ ಪಟ್ಟು

3
Published on

ತುಮಕೂರು ಡಿಸಿ ಕಚೇರಿ ಮುಂಭಾಗ ಅರ್ನಿದಿಷ್ಠಾವಧಿ ಮುಷ್ಕರ | ಶಾಸಕ ಸುರೇಶ್​ಗೌಡ ಬೆಂಬಲ

ವಿಜಯವಾಣಿ ಸುದ್ದಿಜಾಲ ತುಮಕೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಎಲ್ಲ ವೃಂದ ಸಂಘಗಳು ರಾಜ್ಯದೆಲ್ಲೆಡೆ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಎಲ್ಲ ಗ್ರಾಪಂ ಕೆಲಸ ನಿಲ್ಲಿಸಿದ್ದು, ಗ್ರಾಮಾಡಳಿತ ಸ್ತಬ್ಧವಾಗಿದೆ. ಜಿಲ್ಲೆಯೆಲ್ಲೆಡೆಯಿಂದ ಆಗಮಿಸಿದ್ದ ಗ್ರಾಪಂ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಸೋಮವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡು ಅರ್ನಿದಿಷ್ಟಾವಧಿ ಹೋರಾಟ ಆರಂಭಿಸಿದ್ದು, ಬೇಡಿಕೆ ಈಡೇರಿಸುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೋರಾಟವನ್ನು ಬೆಂಬಲಿಸಿ ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್​ಗೌಡ ಕೂಡ ಸ್ಥಳಕ್ಕೆ ಆಗಮಿಸಿ ಮಾತನಾಡಿ, ನಿಮ್ಮ ಬೇಡಿಕೆ ನ್ಯಾಯಯುತವಾಗಿವೆ. ಸರ್ಕಾರ ಸ್ಪಂದಿಸಿ ಕೂಡಲೇ ಬೇಡಿಕೆ ಈಡೇರಿಸಬೇಕು. ಈ ಬಗ್ಗೆ ತಾವು ವಿಧಾನಸಭೆ ಕಲಾಪದಲ್ಲಿ ನಿಮ್ಮ ಪರ ಧ್ವನಿ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಾಷ್ಟ್ರ ಧ್ವಜಾರೋಹಣ ಕಾರ್ಯ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಹೇಳಿದರು. ರಾಜ್ಯದ ಶೇ.68ರಿಂದ 70 ಜನರಿಗೆ ಸ್ಥಳಿಯ ಸಂಸ್ಥೆಯಾದ ಗ್ರಾಪಂ ಶೇ.70ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರು, ಎಲ್ಲ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಹಾಗಾಗಿ ಹೋರಾಟ ಅನಿವಾರ್ಯ ಎಂದರು.


ರಾಜ್ಯದ ಎಲ್ಲ ಪಿಡಿಒಗಳ ಹುದ್ದೆಯನ್ನು ಗೆಜೆಟೆಡ್​ ಗ್ರೂಪ್​ ಬಿ ದರ್ಜೆಗೆ ಉನ್ನತಿಕರಿಸುವುದು, ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈ ಬಿಡುವುದು, ಪಿಡಿಒಗಳ ಜೇಷ್ಠತಾ ಪಟ್ಟಿ ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಕ್ರಮ ತೆಗೆದುಕೊಳ್ಳಬೇಕು, ಎಂಜಿಎನ್​ಆರ್​ಇಜಿಎ ಯೋಜನೆ ಅನುಷ್ಠಾನಪಡಿಸುವ ಬಗ್ಗೆ ಗುರಿ ನಿಗದಿ ಕೈ ಬಿಡುವುದು, ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಗ್ರಾಪಂ ಅಭಿಪ್ರಾಯ ಪಡೆದು ಕೂಸಿನ ಮನೆ ಮುಂದುವರೆಸುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.


ಕುಂದು&ಕೊರತೆ ಪ್ರಾಧಿಕಾರವನ್ನು ಪೊಲೀಸ್​ ಇಲಾಖೆ ಮಾದರಿಯಲ್ಲಿ ಸದೃಢಗೊಳಿಸುವುದು ಮತ್ತು ತಜ್ಞರ ಸಮಿತಿ ನೇಮಿಸುವುದು ಹಾಗೂ ಏಕರೂಪದ ಆಡಿಟ್​ ಪದ್ಧತಿ ಜಾರಿಗೊಳಿಸುವುದು, ಈಗಾಗಲೇ ಹಿಂಪಡೆಯಲಾಗಿರುವ ನರೇಗಾ ಲೋಕಾಯುಕ್ತ ಪ್ರಕರಣಗಳನ್ನು ಶಾಶ್ವತವಾಗಿ ಮುಕ್ತಾಯಗೊಳಿಸಿ ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು. ಪಿಡಿಓಗಳಿಗೆ ಇತರ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ಶೇಕಡ 25ರಷ್ಟು ಹುದ್ದೆಗಳಿಗೆ ಅನುಮತಿ ನೀಡುವಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ದೊಡ್ಡೇರಿ ವಿಜಯಕುಮಾರ್​ ಮಾತನಾಡಿ, ಸಂವಿಧಾನದ ನಿಯಮದಂತೆ ಗ್ರಾಮ ಪಂಚಾಯಿತಿ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅಭಿವೃದ್ಧಿ ನಕ್ಷೆ ರಚಿಸಬೇಕು. ಜವಾಬ್ದಾರಿ ನಕ್ಷೆಯಲ್ಲಿರುವಂತೆ ಆಯಾ ಜವಾಬ್ದಾರಿಗೆ ಸಂಬಂಧಿಸಿದ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ ಹಾಗೂ ಜವಾಬ್ದಾರಿ ನಿರ್ವಹಿಸುವ ಸ್ವಾತಂತ್ರವನ್ನು ಪಂಚಾಯಿತಿಗಳಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.


ಗ್ರಾಮ ಪಂಚಾಯಿತಿಗಳು ಸ್ಥಳಿಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತಾಗಲು ಪಂಚಾಯಿತಿ ಅಧ್ಯಕ್ಷರು ಕಾರ್ಯನಿರ್ವಾಹಕ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುವಂತಾಗಬೇಕು ಹಾಗೂ ಪಿಡಿಒ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಚೇರಿ ನಿರ್ವಹಣಾ ಕೈಪಿಡಿ ರಚಿಸಬೇಕು. ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಾಗಲು ನಿಯಮ ರೂಪಿಸಬೇಕು ಎಂದರು.


ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಸರ್ಕರದ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಆಹ್ವಾನ ಪತ್ರಿಕೆ, ಶಿಲಾಫಲಕಗಳಲ್ಲಿ ಅವರ ಹೆಸರು ಮುದ್ರಿಸಬೇಕು, ವಿಧಾನಸೌಧ, ಇತರ ಕಚೇರಿಗಳಲ್ಲಿ ಹಾಗೂ ಟೋಲ್​ಗಳಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿಜಯಕುಮಾರ್​ ಒತ್ತಾಯಿಸಿದರು.


ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್​, ಎಸ್​ಡಿಸಿಗಳ ಸಂಘದ ಅಧ್ಯಕ್ಷ ಶಾಹಿದ್​ ಅಫ್ರಿದಿ, ಮಂಜುನಾಥ್​, ನಾರಾಯಣಪ್ಪ, ಶ್ರೀನಿವಾಸ್​, ಸತೀಶ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net