

ಮಂಗಳೂರು: ಕೋವಿಡ್ ಕಿಟ್ ಹಂಚಿಕೆಗೆ ಸಂಬಂಧಿಸಿ ಕರೆ ಮಾಡಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೇ ಮಂಗಳೂರಿನ ಗ್ರಾಮ ಪಂಚಾಯಿತಿಯೊಂದರ ಅಭಿವೃದ್ಧಿ ಅಧಿಕಾರಿ ಕಾಯ್ದೆ ತಿಳಿಸಲು ಹೊರಟ ಸ್ವಾರಸ್ಯಕರ ಘಟನೆ ನಡೆದಿದೆ.
ಕಂದಾವರ ಗ್ರಾಪಂನಲ್ಲಿ ಕೋವಿಡ್ ಕಿಟ್ ಸರಿಯಾಗಿ ಹಂಚಿಕೆ ನಡೆಸಿಲ್ಲ ಎಂಬ ಕಾರಣಕ್ಕೆ ಸಚಿವರು ಪಿಡಿಒ ಯಶವಂತ ಎಂಬುವರಿಗೆ ಕರೆ ಮಾಡಿದ್ದರು. ಆಗ ಕೆಟಿಪಿಪಿ ಕಾಯ್ದೆ ಬಗ್ಗೆ ಸಚಿವರಿಗೇ ಪಿಡಿಒ ಪಾಠ ಮಾಡಿದ್ದಾರೆ. ಕೆಟಿಪಿಪಿ(ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ) ಕಾಯ್ದೆ ಬಗ್ಗೆ ಸ್ಪಷ್ಟನೆ ಬೇಕು. ಲಕ್ಷಕ್ಕಿಂತ ಜಾಸ್ತಿ ಮೊತ್ತದ ಖರೀದಿಗೆ ಟೆಂಡರ್ ಬೇಕಾಗುತ್ತದೆ ಎಂದು ಸಬೂಬು ಹೇಳಿದ್ದರು. ಅಸಮಾಧಾನಗೊಂಡ ಸಚಿವರು, ಬೇರೆ ಪಂಚಾಯಿತಿಗಳಲ್ಲಿ ಹೇಗೆ ಆಹಾರ ಕಿಟ್ ನೀಡಿದೆ ಎಂಬುದನ್ನು ಪರಿಶೀಲಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದರು. ಮತ್ತೆ ಪಿಡಿಒ ಕಾಯ್ದೆ ಬಗ್ಗೆ ಮಾತನಾಡಿದಾಗ ಸಮಾಧಾನದಿಂದಲೇ ಸಚಿವರು, ‘ಅಲ್ಲಪ್ಪ, ನೀನು ಯಾರಲ್ಲಿ ಮಾತನಾಡುತ್ತಿದ್ದಿ ಎಂದು ಗೊತ್ತಿದೆಯೇ? ಪಿಡಿಒ ದೊಡ್ಡದೇ, ಸರ್ಕಾರ ದೊಡ್ಡದೇ?’ ಎಂದಿದ್ದಾರೆ. ಜನರಿಗೆ ತೊಂದರೆಯಾಗಬಾರದು, ಬೇರೆ ಪಂಚಾಯಿತಿಯಲ್ಲಿ ಹೇಗೆ ಕೊಟ್ಟಿದ್ದಾರೆ ಎಂಬುದನ್ನು ನೋಡಿಕೊಂಡು ಮುಂದುವರಿ ಎಂದಿದ್ದಾರೆ.
ಅದಕ್ಕೂ ಆತ ಒಪ್ಪದಾಗ, ನಾನೇ ತಾಪಂ ಕಾರ್ಯನಿರ್ವಹಣಾಧಿಕಾರಿ ಜತೆ ಮಾತನಾಡುವುದಾಗಿ ಹೇಳಿ ಸಚಿವರು ಫೋನ್ ಇಟ್ಟಿದ್ದಾರೆ. ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಕಂದಾವರ ಪಿಡಿಒ ಮಾತನಾಡಿದ ವಿಧಾನ ಸರಿ ಇಲ್ಲ. ಅವರಲ್ಲಿ ಮಾತನಾಡಿದ್ದೇನೆ. ನೋಟಿಸ್ ಕೊಟ್ಟು ವಿವರಣೆ ಪಡೆಯಲಾಗುವುದು. ಅವರಿಗೆ ಗೊತ್ತಿರದಿದ್ದರೆ ಬೇರೆ ರೀತಿಯಲ್ಲಿ ಕೇಳಬೇಕಿತ್ತು.
- ಡಾ.ಕುಮಾರ್, ಜಿ.ಪಂ ಸಿಇಒ, ದ.ಕ