

ನಂಜನಗೂಡು : ತಾಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಮಹಿಳೆಯರು ಇಲ್ಲದೆ ಸಭೆ ನಡೆಸುತ್ತಿದ್ದ ಅಧಿಕಾರಿಗಳನ್ನು ಜನ ಸಂಗ್ರಾಮ ಪರಿಷತ್‌ನ ಗೌರವಾಧ್ಯಕ್ಷ ನಗರ್ಲೆ ವಿಜಯಕುಮಾರ್ ತರಾಟೆಗೆ ತೆಗೆದುಕೊಂಡರು.
ಬಿಳಿಗೆರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಮಹಿಳಾ ಗ್ರಾಮ ಸಭೆ, ಆರೋಗ್ಯ ಗ್ರಾಮ, ಗ್ರಾಮ ನೈರ್ಮಲ್ಯ ತರಬೇತಿ ಕುರಿತು ಸಭೆ ಆಯೋಜಿಸಲಾಗಿತ್ತು. ಆದರೆ ಬಿಳಿಗೆರೆ ಗ್ರಾಮದ ಮಹಿಳೆಯರಿಗೆ ಮಾಹಿತಿ ನೀಡಿರಲಿಲ್ಲ. ಇದರಿಂದ ಬಿಳಿಗೆರೆ ಗ್ರಾಮದ ಮಹಿಳೆಯರು ಸಭೆಯಲ್ಲಿ ಮಾಹಿತಿ ಇಲ್ಲದೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಂ.ವಿಜಯಕುಮಾರ್ ಹಾಗೂ ಬೆಳಗುಂದ ಅರ್ಜುನ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅರ್ಹ ಫಲಾನುಭವಿಗಳನ್ನು ಆಹ್ವಾನಿಸದೆ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲೂ ಕೂಡ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದಾರೆ. ಹಾಗಾದರೆ ಕಾರ್ಯಕ್ರಮದ ಉದ್ದೇಶವಾದರೂ ಏನು. ಮಹಿಳೆಯ ಸಬಲೀಕರಣಕ್ಕಾಗಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಮಹಿಳೆಯರೇ ಇಲ್ಲ ಎಂದರೇ ಹೇಗೆ.
ಪ್ರತಿ ಗ್ರಾಮದಲ್ಲಿ ಈ ಬಗ್ಗೆ ಪ್ರಚಾರ ಮಾಡಿ, ಮಹಿಳೆಯರಿಗೆ ಮಾಹಿತಿ ನೀಡಬೇಕು. ಆದರೆ ಇಲ್ಲಿ ಅಧಿಕಾರಿಗಳು ಯಾವುದೇ ಕೆಲಸ ಮಾಡಿಲ್ಲ. ನಾಲ್ಕು ಜನರನ್ನು ಕೂಡಿಸಿಕೊಂಡು ಸಭೆ ಮಾಡಲಾಗಿದೆ ಎಂದು ಕಡತಗಳಲ್ಲಿ ಉಲ್ಲೇಖಿಸುವ ಉದ್ದೇಶ ಮಾತ್ರ ಇದಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಬಿಳಿಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್, ಕಾರ್ಯದರ್ಶಿ ಪುಟ್ಟರಾಜು ನಿಯಮ ಗಾಳಿಗೆ ತೂರಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮಹಿಳೆಯರಿಗೆ ಯಾವುದೇ ಮಾಹಿತಿ ನೀಡದೆ ಕೇವಲ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಹಿಳಾ ಗ್ರಾಮ ಸಭೆ ಸೀಮಿತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಆಡಳಿತ ಕಾಟಚಾರಕ್ಕೆ ಈ ಸಭೆಗಳನ್ನು ಮಾಡಿದ್ದಾರೆ. ಕೂಡಲೇ ಸಭೆಯನ್ನು ಮುಂದೂಡಬೇಕು. ಪಿಡಿಒ ಮತ್ತು ಕಾರ್ಯದರ್ಶಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ಪಿಡಿಒ ಗಣೇಶ್ ಸಭೆ ಸ್ಥಗಿತಗೊಳಿಸಿ ಮುಂದಿನ ದಿನಗಳಲ್ಲಿ ಸಭೆ ಆಯೋಜನೆ ಮಾಡಲಾಗುವುದು, ದಿನಾಂಕ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.