ಪಿಡಿಒ ಮೇಲೆ ಹಲ್ಲೆ ನಡೆಸಿರುವ ಸೂಲೂರು ಗ್ರಾಪಂ ಸದಸ್ಯ ಮುನಿರಾಜು ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿಭಟನೆ

12-klr-1
Published on

ಕೋಲಾರ: ತಾಲೂಕಿನ ಸೂಲೂರು ಗ್ರಾಪಂ ಪಿಡಿಒ ಹಾಗೂ ದ್ವಿತೀಯ ದರ್ಜೆ ಸಹಾಯಕರ ಮೇಲೆ ಹಲ್ಲೆ ನಡೆಸಿರುವ ಗ್ರಾಪಂ ಸದಸ್ಯ ಮುನಿರಾಜು ವಿರುದ್ಧ ಕ್ರಮ ಜರುಗಿಸುವಂತೆ ಪಿಡಿಒಗಳು ಜಿಪಂ ಕಾರ್ಯಾಲಯದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಸೂಲೂರು ಗ್ರಾಪಂ ವ್ಯಾಪ್ತಿಯ ಪೆಮ್ಮಶೆಟ್ಟಿಹಳ್ಳಿಯ ರಸ್ತೆ ಕಾಮಗಾರಿ ವಿಚಾರದಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ. ಪ್ರದೀಪ್ ಜತೆಗೆ ಮಂಗಳವಾರ ಮಧ್ಯಾಹ್ನ ಸ್ಥಳ ಪರಿಶೀಲನೆಗೆಂದು ಹೋಗಿದ್ದೆವು. ಭೇಟಿ ವಿಚಾರ ಸದಸ್ಯ ಮುನಿರಾಜು ಗಮನಕ್ಕೆ ತರಲಾಗಿತ್ತು.

ಸಾರ್ವಜನಿಕರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿ ಕಚೇರಿಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಗ್ರಾಪಂ ಸದಸ್ಯರು ಕಚೇರಿಗೆ ಬಂದು ತನ್ನ ಅನುಮತಿ ಇಲ್ಲದೆ ಗ್ರಾಮಕ್ಕೆ ಭೇಟಿ ನೀಡಿದ್ದನ್ನು ಪ್ರಶ್ನಿಸಿದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರದೀಪ್ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಅಂಗಿ ಹರಿದು ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡಚಣೆ ಉಂಟು ಮಾಡಿದ್ದಾರೆ ಎಂದು ಪಿಡಿಒ ಕೆ.ಸಿ. ಬಾಲಾಜಿ ಆರೋಪಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪಿಡಿಒಗಳ ಸಂಘದ ಜಿಲ್ಲಾಧ್ಯಕ್ಷ ಎನ್.ಸಂಪರಾಜ್, ಪಿಡಿಒ, ಸಿಬ್ಬಂದಿ ಮೇಲೆ ನಿರಂತರ ಹಲ್ಲೆ ನಡೆಯುತ್ತಿರುವುದರಿಂದ ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಹಲ್ಲೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರೂ ತಡರಾತ್ರಿಯವರೆಗೆ ಎಫ್‌ಐಆರ್ ಹಾಕಲಿಲ್ಲ. ಸದಸ್ಯ ಮುನಿರಾಜು ಎಸ್‌ಡಿಎ ಪ್ರದೀಪ್ ವಿರುದ್ಧ ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುನಿರಾಜು ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಜಾತಿ ನಿಂದನೆ ದೂರು ರದ್ದುಪಡಿಸಬೇಕು, ಸದಸ್ಯರ ಸದಸ್ಯತ್ವ ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಪಿಡಿಒ, ನೌಕರ ವರ್ಗ ಮುಕ್ತವಾಗಿ ಕಾರ್ಯನಿರ್ವಹಿಸುವಂತಾಗಲು ಸೂಕ್ತ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಸಿಇಒ ಎಚ್.ವಿ.ದರ್ಶನ್, ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಜಿಪಂ ನಿಮ್ಮ ಪರವಾಗಿದೆ, ಕೇಸು ದಾಖಲಾಗಿರುವುದರಿಂದ ಪೊಲೀಸರು ನಿಸ್ಪಕ್ಷಪಾತ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ವಹಿಸುತ್ತಾರೆ ಎಂದರು.

ಪಿಡಿಒ ಸಂಘದ ಗೌರವಾಧ್ಯಕ್ಷ ಸಿ.ವಿ.ಶಂಕರ್, ರಾಜ್ಯ ಪ್ರತಿನಿಧಿ ಮಹೇಶ್, ಪ್ರಧಾನ ಕಾರ್ಯದರ್ಶಿ ಸುರೇಶ್‌ಗೌಡ, ಪದಾಧಿಕಾರಿಗಳಾದ ಕೃಷ್ಣಪ್ಪ, ಕಾಶಿನಾಥ್ ಹಾಗೂ ವಿವಿಧ ಗ್ರಾಪಂ ಪಿಡಿಒಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

ಅಧಿಕಾರಿಗಳು, ಜನಪ್ರತಿನಿಧಿಗಳು ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ. ಅಧಿಕಾರಿ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ಹೋಗುವುದು ಸರಿಯಲ್ಲ. ಪ್ರಕರಣದ ತನಿಖೆಯಾಗಲಿ, ತಪ್ಪು ಯಾರೇ ಮಾಡಿರಲಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ನ್ಯಾಯದ ಪರ ಜಿಪಂ ನಿಲ್ಲುತ್ತದೆ. ಸಿ.ಎಸ್. ವೆಂಕಟೇಶ್, ಜಿಪಂ ಅಧ್ಯಕ್ಷ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net