ಮರೇಪ್ಪಾ ಮೇತ್ರಿ ಅವರಿಗೆ ಪಿಡಿಒ ಆಫ್‌ ದಿ ಮಂತ್‌ ಪ್ರಶಸ್ತಿ

PDo off the month
Published on

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ "ಬೆಸ್ಟ್ ಪಿಡಿಒ ಆಫ್ ದಿ ಮಂತ್; ಪ್ರಶಸ್ತಿಗೆ ಏಪ್ರಿಲ್ ತಿಂಗಳಿಗೆ ಆಯ್ಕೆಯಾದ ಹಳಿಯಾಳ ತಾಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮರೇಪ್ಪಾ ಮೇತ್ರಿ ಅವರಿಗೆ ಗುರುವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು.

ಸರ್ಕಾರದ ಯೋಜನೆಗಳನ್ನು ತಳ ಮಟ್ಟದಲ್ಲಿ ಅನಿಷ್ಠಾನಕ್ಕೆ ತರಬೇಕಾದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ ಸಾರ್ವಜನಿಕರ ಮತ್ತು ಗ್ರಾಮಗಳ ಕಲ್ಯಾಣಕ್ಕೆ ತಳ ಮಟ್ಟದಲ್ಲಿ ಎಲ್ಲರೊಂದಿಗೆ ಸಮನ್ವಯ ಸಾಧಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಕೆಲವು ಮಾನದಂಡಗಳ ಪ್ರಕಾರ ಪ್ರತಿ ತಿಂಗಳು ಆಯ್ಕೆ ಮಾಡಿ ಅಭಿನಂದನಾ ಪತ್ರ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಶಸ್ತಿ ಪಡೆದು ಮಾತನಾಡಿದ ಮರೇಪ್ಪಾ ಮೇತ್ರಿ ನನ್ನ ಸುದೀರ್ಘ ಸೇವಾ ಅವಧಿಯಲ್ಲಿ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನನ್ನೆಲ್ಲ ಕಾರ್ಯಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸಹಕರಿಸಿದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತ, ಪಂಚಾಯತ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net