ಹಟ್ಟಿಕೇರಿ ಗ್ರಾಪಂ ಪಿಡಿಒ ಲೀಲಾ ಆಗೇರ ಅವರಿಗೆ ಬೆಸ್ಟ್‌ ಪಿಡಿಒ ಆಫ್‌ ದ ಮಂತ್‌ ಪ್ರಶಸ್ತಿ

PDO of the month
Published on

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಬೆಸ್ಟ್ ಪಿಡಿಒ ಆಫ್ ದಿ ಮಂತ್  ಪ್ರಶಸ್ತಿಗೆ ಜನವರಿ ತಿಂಗಳಿಗೆ ಆಯ್ಕೆಯಾದ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೀಲಾ ಬಿ. ಆಗೇರ್ ಅವರಿಗೆ ಸೋಮವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದರು.

ಪ್ರಶಸ್ತಿ ಪಡೆದು ಮಾತನಾಡಿದ ಲೀಲಾ ಆಗೇರ್ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಲವಾರು ಸವಾಲುಗಳ ಮಧ್ಯೆ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ, ಅವರ ಪರಿಶ್ರಮ ಮತ್ತು ಸೇವೆಯನ್ನು ಗುರುತಿಸಿ, ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುವುದು ಹೆಮ್ಮೆಯ ವಿಷಯ ಮುಂಬರುವ ದಿನಗಳಲ್ಲಿಯೂ ಇದೇ ರೀತಿ ಜನರಿಗೆ ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತೇನೆ. ಮಾರ್ಗದರ್ಶನ ನೀಡಿ, ಸಹಕರಿಸಿದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಯೋಜನಾ ನಿರ್ದೇಶಕ ಕರೀಂ ಅಸದಿ, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೆಸ್ತಾ, ಲೆಕ್ಕಾಧಿಕಾರಿ ಪರಶುರಾಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net