

ಮಂಡ್ಯ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಲು ಜ್ಯೇಷ್ಠತಾ ಪಟ್ಟಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಲು 2014ರ ಜ್ಯೇಷ್ಠತಾ ಪಟ್ಟಿಯಂತೆ 300ಕ್ಕಿಂತ ಹೆಚ್ಚಿನ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಆದರೆ 2019ರಲ್ಲಿ ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 2014ರ ಜ್ಯೇಷ್ಠತಾ ಪಟ್ಟಿಯಲ್ಲಿ ಗೊಂದಲವಾಗಿದೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಈ ಪ್ರಕರಣ ಚಾಲ್ತಿಯಲ್ಲಿದ್ದು, 2010ರಲ್ಲಿ ಆಯ್ಕೆಯಾಗಿರುವ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ಒಂದೇ ದಿನ ನೋಟಿಫಿಕೇಷನ್, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟವಾಗಿದೆ. ಅದರಂತೆ ಅಭ್ಯರ್ಥಿಗಳು ಪಡೆದಿರುವ ಅಂಕಗಳ ಆಧಾರದ ಮೇಲೆ 2014ರಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಲಾಗಿರುತ್ತದೆ. ಆದರೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಈ ಮಧ್ಯೆ ತಾತ್ಕಾಲಿಕವಾಗಿ ವಕಿರ್ಂಗ್ ಅರೇಂಜ್ಮೆಂಟ್ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ 17 ಜಿಲ್ಲೆಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಆದ್ಯತೆಯಲ್ಲಿ ಮೊದಲಿಗೆ ಪರಿಗಣಿಸಿ 13 ಜಿಲ್ಲೆಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕೊನೆಯಲ್ಲಿ ಸೇರಿಸಿ ಜ್ಯೇಷ್ಠತಾ ಪಟ್ಟಿ ತಯಾರಿಸಲಾಗಿರುತ್ತದೆ ಎಂದು ಆರೋಪಿಸಿದರು.
ಇದರಿಂದ ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಸೇರಿದಂತೆ 13 ಜಿಲ್ಲೆಗಳಿಗೆ ಅನ್ಯಾಯವಾಗಿದ್ದು, ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ತಾತ್ಕಾಲಿಕ ವಕಿರ್ಂಗ್ ಅರೇಂಜ್ಮೆಂಟ್ ರದ್ದುಗೊಳಿಸಬೇಕೆಂದು ಈ ಹಿಂದೆಯೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ನ್ಯಾಯಾಲಯದಲ್ಲಿ ಸರಿಯಾದ ವಾದ ಮಂಡಿಸದೆ ಇರುವುದರಿಂದ ನಮ್ಮ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಸರಿಯಾದ ಕ್ರಮ ಅನುಸರಿಸಬೇಕು ಹಾಗೂ ತಾತ್ಕಾಲಿಕ ವಕಿರ್ಂಗ್ ಅರೇಂಜ್ಮೆಂಟ್ ಮಾಡುತ್ತಿರುವುದನ್ನು ತಕ್ಷಣವೇ ಕೈಬಿಡಬೇಕೆಂದು ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಟಿ.ಎ.ಪ್ರಶಾಂತಬಾಬು, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಕುಮಾರ್, ರಾಜ್ಯ ಪರಿಷತ್ ಸದಸ್ಯ ದಿನೇಶ್ ಕುಮಾರ್, ಸೋಮಶೇಖರ್, ಪಿಡಿಒಗಳಾದ ಮಲ್ಲೇಶ್, ಗಂಗಾಧರ್, ಮಂಜು, ಲೋಕೇಶ್ ಇತರರಿದ್ದರು.