

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಕನ್ನಮಂಗಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರ್ತವ್ಯಲೋಪ ಎಸಗುವ ಮೂಲಕ ಗ್ರಾಪಂ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂಬ ಅಧ್ಯಕ್ಷ ಹಾಗೂ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಇಒ ವಸಂತ್‌ಕುಮಾರ್ ಸೂಚನೆಯಂತೆ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ.
ಪಿಡಿಒ ಆದರ್ಶ ಅವರ ವಿರುದ್ಧ ಪಂಚಾಯಿತಿ ಜನಪ್ರತಿನಿಧಿಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಇಲಾಖಾ ತನಿಖೆಗೆ ಸೂಚನೆ ನೀಡಿರುವುದಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ವಿಚಾರದಲ್ಲಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಸರ್ಕಾರದ ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂದು ಗ್ರಾಪಂ ಅಧ್ಯಕ್ಷ ಲಕ್ಷ್ಮೀಕಾಂತ್ ಮತ್ತು ಸದಸ್ಯರು ಆರ್‌ಡಿಪಿಆರ್‌ಗೆ ಇತ್ತೀಚೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳ ತಂಡ ಗ್ರಾಪಂ ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದೆ.
ಗ್ರಾಪಂ ಅಧ್ಯಕ್ಷ ಆರೋಪ: ಎರಡು ವರ್ಷದ ಹಿಂದೆ ಪಿಡಿಒ ಪಂಚಾಯಿತಿಗೆ ಬಂದಿದ್ದು, ಅಂದಿನಿಂದಲೂ ಪ್ರಮುಖವಾದ ಯಾವುದೇ ಕಾಮಗಾರಿಗೆ ಅನುವು ಮಾಡಿಕೊಟ್ಟಿಲ್ಲ. ನರೇಗಾದಡಿ ಶೇ 8.63 ಮಾತ್ರ ಕೆಲಸಗಳಾಗಿವೆ. ಅಭಿವೃದ್ಧಿ ವಿಷಯದಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಿಗಿಂತ ಕಡೆಯ ಸ್ಥಾನದಲ್ಲಿದೆ. ಸಮರ್ಪಕವಾಗಿ ಆಸ್ತಿ ಸಮೀಕ್ಷೆ ಮಾಡಿಲ್ಲ. ತೆರಿಗೆ ವಸೂಲಿಯಲ್ಲೂ ಹಿಂದುಳಿದಿದ್ದು, ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸುವುದನ್ನು ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಉಳಿಕೆ ಆಸ್ತಿದಾರರಿಂದ ತೆರಿಗೆ ವಸೂಲಿ ಮಾಡುತ್ತಿಲ್ಲ, ವಾರ್ಷಿಕ 7 ರಿಂದ 8 ಕೋಟಿ ರೂ.ತೆರಿಗೆ ಸಂಗ್ರವಾಗಬೇಕಿದ್ದು ಇವರ ಅವಧಿಯಲ್ಲಿ 3ಕೋಟಿ ರೂ.ದಾಟುತ್ತಿಲ್ಲ, 15ನೇ ಹಣಕಾಸಿನಲ್ಲಿ ಕಾಮಗಾರಿಗಳಿಗೆ ಬಳಕೆ ಮಾಡದ 1.30 ಕೋಟಿ ಹಣ ಹಾಗೆಯೇ ಉಳಿದಿದೆ. ಶೇ.3.5 ಅಂಗವಿಕಲರ ಅನುದಾನವೂ ಸಂಪೂರ್ಣ ಬಳಕೆಯಾಗಿಲ್ಲ ಎಂದು ಲಕ್ಷ್ಮೀಕಾಂತ್ ದೂರಿದ್ದಾರೆ.
ನಮ್ಮ ಪಂಚಾಯಿತಿ ಗಾಂಧಿ ಪ್ರಶಸ್ತಿ ಪುರಸ್ಕೃತವಾಗಿತ್ತು, ಇಂಥ ಪಂಚಾಯಿತಿ ಒಳ್ಳೆಯ ವಿಚಾರಕ್ಕೆ ಸುದ್ದಿಯಾಗದೆ ಒಂದಿಲ್ಲೊಂದು ಸಮಸ್ಯೆಗಳ ವಿವಾದಗಳ ಬಗ್ಗೆ ಸುದ್ದಿಯಾಗುವುದು ನಮಗೂ ಬೇಸರ ತಂದಿದೆ ಎಂದು ಮಾಜಿ ಅಧ್ಯಕ್ಷ ನಾಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಶೀಲಿಸಿ ವರದಿ: ಕಡತಗಳ ತನಿಖೆ ಮಾಡುತ್ತಿರುವ ಇಓ ಎಚ್.ಡಿ ವಸಂತಕುಮಾರ್ ಮಾತನಾಡಿ, ಗ್ರಾಪಂ ಅಧ್ಯಕ್ಷರ ಮತ್ತು ಸದಸ್ಯರ ಪಂಚಾಯತಿ ಅನುದಾನ ಬಳಕೆಯಾಗುತ್ತಿಲ್ಲ, ಕಾಮಗಾರಿಗಳಾಗುತ್ತಿಲ್ಲ. ಪಿಡಿಒ ಕೆಲಸದಲ್ಲಿ ನಿರಾಸಕ್ತರಾಗಿದ್ದಾರೆ. ಜನಪ್ರತಿನಿಧಿಗಳಿಗೆ ಸಹಕರಿಸುತ್ತಿಲ್ಲ ಎಂದು ಲಿಖಿತ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ನಮ್ಮ ತಂಡವನ್ನು ಪರಿಶೀಲನೆಗೆ ಕಳುಹಿಸಿದ್ದು, ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸುತ್ತೇವೆ ಎಂದು ಇಒ ವಸಂತ್‌ಕುಮಾರ್ ತಿಳಿಸಿದ್ದಾರೆ.