ಪಿಡಿಒ ಎಕ್ಷಾಂನಲ್ಲಿ ಆಕ್ರಮ ಆರೋಪ

17 SND 01
ಸಿಂಧನೂರು ಸರ್ಕಾರಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪಿಡಿಒ ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೆಲ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ, ಕುಷ್ಟಗಿ-ಸಿಂಧನೂರು ಹೆದ್ದಾರಿ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
Published on

ಸಿಂಧನೂರು: ನಗರದ ಕುಷ್ಟಗಿ ಮಾರ್ಗದಲ್ಲಿರುವ ಸರ್ಕಾರಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪಿಡಿಒ ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೆಲ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ, ಕುಷ್ಟ್ಟಗಿ-ಸಿಂಧನೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಪರೀಕ್ಷಾ ಸಮಯಕ್ಕೆ ಆಯಾ ಕೋಣೆಯಲ್ಲಿ ಪರೀಕ್ಷಾರ್ಥಿಗಳಿಗೆ ಸರಿಯಾಗಿ ಪ್ರಶ್ನೆಪತ್ರಿಕೆಗಳನ್ನು ಹಂಚಿಲ್ಲ. ಕೆಲವರಿಗೆ ತಡವಾಗಿ ಹಂಚಲಾಗಿದೆ. ಇನ್ನೂ ಕೆಲ ಕೊಠಡಿಗಳಿಗೆ ಕಡಿಮೆ ಪ್ರಶ್ನೆ ಪತ್ರಿಕೆಗಳು ವಿತರಣೆಯಾಗಿವೆ. ಪರೀಕ್ಷಾ ವೇಳೆಗೆ ನಮಗೆ ಪ್ರಶ್ನೆ ಪತ್ರಿಕೆ ವಿತರಿಸಲು ಕೇಳಿದರೆ ಮೇಲ್ವಿಚಾರಕರು ಸ್ವಲ್ಪ ತಡೆಯಿರಿ ಎಂದು ಹೇಳಿದರು. ಹೀಗಾದರೆ ಹೇಗೆ ? ಈ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಏಕಾಏಕಿ ಪರೀಕ್ಷಾ ಕೇಂದ್ರದಿಂದ ಹೊರಬಂದ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿಯಲ್ಲಿ ಕುಳಿತ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲವೊತ್ತು ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪರೀಕ್ಷಾರ್ಥಿಗಳು ಹೆದ್ದಾರಿಯಲ್ಲಿ ದಿಢೀರ್ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ, ಈ ಮಾರ್ಗದಲ್ಲಿ ನಾಲ್ಕು ತಾಸುಗಳವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪರೀಕ್ಷಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಹೆಣಗಾಡಬೇಕಾಯಿತು.

ತಹಸೀಲ್ದಾರ್, ಡಿವೈಎಸ್ಪಿ, ಪಿಐ ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಪರೀಕ್ಷಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರೂ ಫಲಪ್ರದವಾಗಲಿಲ್ಲ. ಕೆಲವರು ಪರೀಕ್ಷೆ ಬರೆದರೆ, ಅರ್ಧದಷ್ಟು ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿದ್ದರು.

ಸಂಚಾರ ಸ್ಥಗಿತ: ಸರ್ಕಾರಿ ಮಹಾವಿದ್ಯಾಲಯದ ಮುಂದೆ ನೂರಾರು ವಿದ್ಯಾರ್ಥಿಗಳು ರಸ್ತೆ ಮೇಲೆ ಕುಳಿತು ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದಾರಿಂದ ವಾಹನ ಸಂಚಾರ ನಾಲ್ಕು ತಾಸುಗಳವರೆಗೆ ಸ್ಥಗಿತಗೊಂಡಿತು. ಪೊಲೀಸ್ ಸಿಬ್ಬಂದಿ ಪರೀಕ್ಷಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರೂ ಅವರು ಪಟ್ಟು ಸಡಿಲಿಸಲಿಲ್ಲ.

ಮನವೊಲಿಕೆ: ಪ್ರತಿಭಟನೆ ಕೈಬಿಟ್ಟು ಪರೀಕ್ಷೆ ಬರೆಯುವಂತೆ ಪರೀಕ್ಷಾರ್ಥಿಗಳಿಗೆ ತಹಸೀಲ್ದಾರ್ ಅರುಣ ದೇಸಾಯಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಎಂಎಲ್‌ಸಿ ಬಸನಗೌಡ ಬಾದರ್ಲಿ ಮನವೊಲಿಸಲು ಪ್ರಯತ್ನಿಸಿದರೂ, ಪಟ್ಟು ಬಿಡದೆ ಸಂಜೆವರೆಗೂ ಪರೀಕ್ಷಾರ್ಥಿಗಳು ಪ್ರತಿಭಟನೆ ಮುಂದುವರೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net