ಪಿಡಿಒಗಳ ಮೇಲೆ ಎಫ್‌ಐಆರ್, ಬೀಳ್ಕೊಡುಗೆ ಸಮಾರಂಭದಲ್ಲಿ ಚಿನ್ನ, ಬೆಳ್ಳಿ ಉಡುಗೊರೆ ನೀಡಿರುವ ಆರೋಪ

28-klr-7
Published on

ಕೋಲಾರ: ಜಿಪಂನ ನಿರ್ಗಮಿತ ಸಿಇಒ ಹಾಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ವೇಳೆ ಚಿನ್ನ, ಬೆಳ್ಳಿ ಉಡುಗೊರೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸಪುರ ತಾಪಂ ಸೇರಿ 9 ಪಿಡಿಒಗಳ ಮೇಲೆ ತನಿಖೆ ನಡೆಸಿ ವರದಿ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸಿಬಿಗೆ ಆದೇಶಿಸಿದೆ.

2019ರ ಆ.23ರಂದು ಕೋಲಾರ ಜಿಪಂ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್ ಹಾಗೂ 9 ಪಿಡಿಒಗಳು ಕೆಸಿಎಸ್ ನಿಯಮಗಳಿಗೆ ವಿರುದ್ಧವಾಗಿ ಹಾಗೂ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ಬೆಳ್ಳಿಗದೆ, ಕಿರೀಟ ಹಾಗೂ ಚಿನ್ನದ ಉಂಗುರವನ್ನು ನೀಡುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ನಾರಾಯಣಸ್ವಾಮಿ ಭ್ರಷ್ಟಾಚಾರ ನಿಗ್ರಹದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ 2020ರ ಜೂ.17ರಂದು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್. ರಘುನಾಥ್ ತನಿಖೆ ನಡೆಸಿ ಆ.25ರೊಳಗೆ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಆದೇಶ ನೀಡಿದ್ದಾರೆ.

ಎಫ್‌ಐ ಆರ್ ದಾಖಲು: ಜೂ.25 ರಂದು ನಿರ್ಗಮಿತ ಜಿಪಂ ಸಿಇಒ ಜಗದೀಶ್, ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್ ಸೇರಿ ನರಸಾಪುರ ಗ್ರಾಪಂ ಪಿಡಿಒ ಕೆ.ಮಹೇಶ್‌ಕುಮಾರ್, ಮಾಸ್ತೇನಹಳ್ಳಿ ಪಿಡಿಒ ಪಿ.ನಾರಾಯಣಪ್ಪ, ಹರಟಿ ಪಿಡಿಒ ಎಂ.ರಾಮಕೃಷ್ಣ, ಮಾಗೊಂದಿಯ ವಿ.ಶಂಕರ್, ಬೆಳ್ಳೂರು ಪಿಡಿಒ ಎನ್.ಸಂಪರಾಜ್, ಸೂಲೂರು ಪಿಡಿಒ ಎಸ್.ಜಿ.ಹರೀಶ್‌ಕುಮಾರ್, ಹೋಳೂರು ಪಿಡಿಒ ಎಂ.ಸೋಮಶೇಖರ್, ಅಂಬ್ಲಿಕಲ್ ಪಿಡಿಒ ಅಶ್ವತ್ಥ ನಾರಾಯಣ ಹಾಗೂ ಅಗರ ಗ್ರಾಪಂ ಪಿಡಿಒ ಎಂ.ಸುರೇಶ್‌ಕುಮಾರ್ ವಿರುದ್ಧ ಎಸಿಬಿಯು ಐಪಿಸಿ ಕಲಂ 465, 467, 468, 471ರ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿ ಜಿ.ಮಂಜುನಾಥ್ ಸೇರಿ ಒಟ್ಟು ಆರು ಅಧಿಕಾರಿಗಳನ್ನು ಸಾಕ್ಷಿಯನ್ನಾಗಿ ಗುರುತಿಸಲಾಗಿದೆ.

ಜಿಪಂ ನಿರ್ಗಮಿತ ಸಿಇಒ ಜಗದೀಶ್ ಬೀಳ್ಕೊಡುಗೆ ಸಮಾರಂಭದಲ್ಲಿ ನೀಡಿರುವ ಉಡುಗೊರೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಎಸ್ಪಿಗೆ ಆದೇಶ ಬಂದಿದೆ. ಮೇಲಾಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಂ.ಎಲ್. ಪುರುಷೋತ್ತಮ್, ಡಿವೈಎಸ್ಪಿ, ಎಸಿಬಿ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net