ಸತತ ಪ್ರಯತ್ನದಿಂದ ಗುರಿ ಸಾಧಿಸಿ

web 1
Published on

ಧಾರವಾಡ: ಸರ್ಕಾರಿ ಸೇವೆ ಒಂದು ಅದ್ಭುತ ಅನುಭವವಾಗಿದ್ದು, ಜನಸೇವೆಯಲ್ಲಿಯೇ ತಪ್ತಿ ಕಾಣಲು ಸಾಧ್ಯ.  ಕಠಿಣ ಮತ್ತು ಸತತ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗುರಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರಗಳು ಪೂರಕ ಎಂದು ತೇಗೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರತ್ನಾ ಪಾಟೀಲ ಹೇಳಿದರು.
ನಗರದ ಕ್ಲಾಸಿಕ್ ಕೆಎಎಸ್- ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಮೂಲಗಳಿಂದ ಜ್ಞಾನ ಸಂಪಾದಿಸಲು ಗ್ರಂಥಾಲಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಅಪರಾಧ ನಿಗ್ರಹ ಮತ್ತು ವಿಧಿವಿಜ್ಞಾನ ಇಲಾಖೆಯ ಪಿಎಸ್‌ಐ ಮಲ್ಲಿಕ್ ಕೊರಬು ಮಾತನಾಡಿ, ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸರ್ಕಾರ ಕರೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ಇದರಿಂದ ಅನುಭವ ದೊರೆತು ಗುರಿ ಮುಟ್ಟಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಈರಣ್ಣ ಅಂಬಿ ಪಿಡಿಒ ಪರೀಕ್ಷೆ ಕುರಿತು ಉಪನ್ಯಾಸ ನೀಡಿದರು. ಕ್ಲಾಸಿಕ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ. ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ದೀಪಕ ಜೋಡಂಗಿ ಸ್ವಾಗತಿಸಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net