ಜೀವ ಬೆದರಿಕೆ ಹಾಕಿದ್ದವರ ವಿರುದ್ಧ ಪಿಡಿಒ ದೂರು

Published on

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಂ.ರಮೇಶ್‌ಗೆ ಜೀವ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಪಿಡಿಒ ಇದೆ ಪಂಚಾಯಿತಿ ವ್ಯಾಪ್ತಿಯ ಐವರ ವಿರುದ್ಧ ದೂರು ನೀಡಿದ್ದಾರೆ.

ಬುಧವಾರ ಗ್ರಾಮ ಪಂಚಾಯಿತಿ ಕಚೇರಿಯ ಸಮಯದಲ್ಲಿ ನಾನು ಕರ್ತವ್ಯ ನಿರ್ವಹಿಸುವಾಗ ಕಚೇರಿಗೆ ಬಂದ ಕೃಷ್ಣಯ್ಯ, ವಡಗೆರೆ ಗ್ರಾಮದ ಆನಂದ, ಗ್ರಾಪಂ ಮಾಜಿ ಸದಸ್ಯ ಜಯಲಿಂಗ, ಗುತ್ತಿಗೆದಾರರಾದ ಬಂಗಾರಪ್ಪ ಮತ್ತು ರಂಗಸ್ವಾಮಿ ಎಂಬುವವರು ನರೇಗಾ ಕಾಮಗಾರಿಯನ್ನು ನೀಡಿ ಎಂದು ಜೋರು ಧ್ವನಿಯಲ್ಲಿ ಧಮ್ಕಿ ಹಾಕಿದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಲ್ಲಿ ಹೊಡೆಯುತ್ತೇವೆ. ನಿನಗೆ ಸುಮ್ಮನೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹಾಗಾಗಿ ನಾನು ಕಚೇರಿಯಲ್ಲಿ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗಿದ್ದು ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶುಕ್ರವಾರ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net