ಆರೋಪಿಯ ಬಂಧನಕ್ಕೆ ಬಿಗಿ ಪಟ್ಟು; ಮುಂದುವರಿದ ಪಿಡಿಒ ಸಂಘದ ಪ್ರತಿಭಟನೆ

6 Dwd 2
Published on

ಧಾರವಾಡ: ತಾಲೂಕಿನ ಯರಿಕೊಪ್ಪ ಗ್ರಾಮದ ಪಿಡಿಒ ನಾಗರಾಜ ಗಿನಿವಾಲದ ಆತ್ಮಹತ್ಯೆ ಯತ್ನ ಪ್ರಕರಣದ ಆರೋಪಿಯನ್ನು ಬಂಧಿಸಲು ಆಗ್ರಹಿಸಿ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಬುಧವಾರವೂ ಮುಂದುವರಿಯಿತು.
ಸಂಘದ ರಾಜ್ಯಾಧ್ಯಕ್ಷ ರಾಜು ವಾರದ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದಿಂದ ‘ಧಾರವಾಡ ಚಲೋ’ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡದ ಪಿಡಿಒಗಳಿಗೆ ಗದಗ, ಹಾವೇರಿ, ದಾವಣಗೆರೆ ಹಾಗೂ ಬೆಳಗಾವಿ ಜಿಲ್ಲೆಗಳ ಪಿಡಿಒಗಳು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಪಿಡಿಒ ನಾಗರಾಜ ವಿಷ ಕುಡಿಯುವ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ತಮಗಾದ ಮಾನಸಿಕ ಒತ್ತಡವನ್ನು ವಿವರಿಸಿದ್ದಾರೆ. ಇದಕ್ಕೆ ಆರ್‌ಟಿಐ ಕಾರ್ಯಕರ್ತ ಮಲ್ಲಿಕಾರ್ಜುನ ರೊಟ್ಟಿಗವಾಡ ಕಾರಣ ಎಂದಿದ್ದಾರೆ. ಘಟನೆಯ ನಂತರ ರೊಟ್ಟಿಗವಾಡ ಕಾಣೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಬೇಕು. ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪುಷ್ಪಾವತಿ ಮೇದಾರ, ಸಿ.ಎಂ. ಧರೆಣ್ಣವರ, ಪ್ರವೀಣ ಗಣಿ, ಸವಿತಾ ಕಬ್ಬೇರ, ಬಿ.ಎ. ಮಡಿವಾಳರ, ತನ್ವೀರ ಡಿ., ಅನಿತಾ ಹಿರೇಮಠ, ಡಿ.ಎನ್. ಸವದಿ, ಬಾಬು ದೇಸಾಯಿ, ಶೈಲಾ ನೀಲಗಾರ, ಸಿದ್ದು ಐರಣಿ, ಆನಂದ ನಾವಳ್ಳಿ, ಜ್ಯೋತಿ ಚಲವಾದಿ, ಪರಶುರಾಮ ಕವಲೂರ, ಇಸ್ಮಾಯಿಲ್, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net