

ಮಂಡ್ಯ: ಶ್ರೀರಂಗಪಟ್ಣಣ ತಾಲೂಕು ತಡಗವಾಡಿ ಗ್ರಾಮ ಪಂಚಾಯಿತಿಯ ಪಿಡಿಒ ಅವರು ಸಾರ್ವಜನಿಕ ಕೆಲಸಗಳನ್ನು ಮಾಡಿಕೊಳ್ಳದೇ ವಿನಾಕಾರಣ ಅಲೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಅಧ್ಯಕ್ಷ ಜಿ.ಎನ್.ಮಧುಗೌಡ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸದಸ್ಯರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.
ಪಿಡಿಒ ವಿರುದ್ಧ ಹರಿಯಾಯ್ದ ಸದಸ್ಯರು, ಸರ್ಕಾರದ ನಿಯಮದಂತೆ ಯೋಜನೆ ತಯಾರಿ ಪಟ್ಟಿಕೊಡಲಾಗಿದೆ. ಆದರೆ ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಂಡಿರುವ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೊಳಿಸಲು ಆಗುತ್ತಿಲ್ಲ. ಇದರಲ್ಲಿಯೂ ಪಿಡಿಒ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಕಳೆದ ಜನವರಿಯಿಂದಲೂ ಸರಿಯಾಗಿ ಪಿಡಿಒ ಅವರು ಲಭ್ಯವಿಲ್ಲದೇ ಮಾಹಿತಿಯೂ ನೀಡದೇ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ. ಯೋಜನೆಗಳ ಬಗ್ಗೆಯೂ ಯಾವ ವಿಚಾರವನ್ನು ತಿಳಿಸದೇ ಯೋಜನೆಯ ಕಾರ್ಯಕ್ರಮಗಳ ಅನುದಾನವು ವಾಪಸ್ ಹೋಗುತ್ತಿವೆ. ಇದು ಸರ್ವೇ ಸಾಮಾನ್ಯವಾಗಿದೆ ಎಂದು ಆರೋಪಿಸಿದರು.
ಗ್ರಾಪಂ ಸದಸ್ಯರಾದ ಸುಮಿತ್ರಾ ಪುಟ್ಟಸ್ವಾಮಿ, ಸುಕನ್ಯಾ ಲೋಕೇಶ್, ಶಾರದಾ ಮಾದೇಗೌಡ, ಮುಖಂಡರಾದ ಪ್ರಭಾಕರ್, ರಾಮಚಂದ್ರು, ಶಂಕರೇಗೌಡ, ಶ್ರೀನಿವಾಸ್, ಜವರೇಗೌಡ, ಉಮಾ ಇತರರಿದ್ದರು.