ಆತ್ಮಸಾಕ್ಷಿಯಿಂದ ಕೆಲಸ ಮಾಡಿ, ಪಿಡಿಒಗಳಿಗೆ ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ತಾಕೀತು

31-klr-3
Published on

ಕೋಲಾರ: ಗ್ರಾಪಂಗಳಲ್ಲಿಸಂಪನ್ಮೂಲ,ಅನುದಾನ ಬಳಕೆ ಬಗ್ಗೆ ಲೆಕ್ಕಪರಿಶೋಧನೆಯಲ್ಲಿ ವ್ಯಕ್ತಪಡಿಸಿರುವ ಆಕ್ಷೇಪಣೆ, ವಸೂಲಾತಿ ವಿಚಾರಯಲ್ಲಿನ ಲೋಪದ ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ದಾಖಲಾತಿ ಒದಗಿಸಲು ಕ್ರಮ ವಹಿಸುವಂತೆ ಜಿಪಂ ಉಪಕಾರ್ಯದರ್ಶಿ ಕೆ.ಪಿ. ಸಂಜೀವಪ್ಪ ಪಿಡಿಒಗಳಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಸೋಮವಾರ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ 156 ಗ್ರಾಪಂ ವ್ಯಾಪ್ತಿಯಲ್ಲಿ 1994-95ರಿಂದ ಈವರೆಗೆ ಸರ್ಕಾರದ ಅನುದಾನ ಮತ್ತು ಸ್ಥಳೀಯ ಆರ್ಥಿಕ ಸಂಪನ್ಮೂಲ ಬಳಕೆಯಲ್ಲಿ 70 ಕೋಟಿ ರೂ.ಗಳಿಗೆ ಆಕ್ಷೇಪಣೆ ಹಾಗೂ 7 ಕೋಟಿ ವಸೂಲಾತಿ ಪತ್ರದಲ್ಲಿದೆ. ಇತ್ತೀಚೆಗೆ ನಡೆದ ಭರವಸೆಗಳ ಸಮಿತಿ ಸಭೆ ಗಂಭೀರವಾಗಿ ಪರಿಗಣಿಸಿದೆ ಎಂದರು.

ವಿಶೇಷವಾಗಿ 2014-15ನೇ ಸಾಲಿಗೆ ಲೆಕ್ಕಪರಿಶೋಧಕರು ವ್ಯಕ್ತಪಡಿಸಿರುವ ಆಕ್ಷೇಪಣೆ, ತೀರುವಳಿ, ವಸೂಲಾತಿ ಸಂಬಂಧ ಆ ಅವಧಿಯಲ್ಲಿದ್ದ ಪಿಡಿಒ, ಇಂಜಿನಿಯರ್‌ಗಳಿಗೆ ನೋಟಿಸ್ ನೀಡಿ ದಾಖಲೆ ಸರಿಪಡಿಸಿಕೊಡಲು ತಿಳಿಸಬೇಕು, ಅಕಾಡ್ ಸಮಿತಿ ಸಭೆ ಕರೆದು ಚರ್ಚಿಸಿ ಕ್ರಮ ವಹಿಸಬೇಕು, ಭರವಸೆಗಳ ಸಮಿತಿ ಮುಂದೆ ಜಿಪಂ ಸಿಇಒ ಮಂಡಿಸಬೇಕಿರುವುದರಿಂದ ಗಂಭೀರವಾಗಿ ತೆಗೆದುಕೊಂಡು ಆಗಿರುವ ಲೋಪ ಸರಿಪಡಿಸಿಕೊಳ್ಳಬೇಕು ಎಂದು ಪಿಡಿಒಗಳಿಗೆ ತಾಕೀತು ಮಾಡಿದರು.

ಅಸಮರ್ಪಕ ಮಾಹಿತಿ: ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿಗಳು ಕೇಳಿರುವ ಮಾಹಿತಿಗೆ ಕೆಲ ಪಿಡಿಒಗಳ ಅಸಮರ್ಪಕ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಜೀವಪ್ಪ, ನಮೂನೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ, ಕಂಪ್ಯೂಟರ್ ಆಪರೇಟರ್ ನೀಡಿದ ಮಾಹಿತಿ ಕಳುಹಿಸುವ ಮುನ್ನ ಪರಿಶೀಲಿಸಬೇಕೆಂಬ ಜವಾಬ್ದಾರಿಯೂ ಇಲ್ಲವೇ? ಸರ್ಕಾರ ನೀಡುವ ಸಂಬಳಕ್ಕೆ ಆತ್ಮಸಾಕ್ಷಿಯಿಂದ ಕೆಲಸ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.

ತಂಡ ರಚಿಸಿ: ನರೇಗಾ ಸಂಬಂಧ ಅವಶ್ಯ ದಾಖಲೆಗಳನ್ನು ಅಪ್‌ಡೇಟ್ ಮಾಡಲು ಐವರು ಉತ್ತಮ ಪಿಡಿಒಗಳ ತಂಡ ರಚಿಸಿ ಗ್ರಾಪಂಗಳಿಗೆ ಕಳುಹಿಸುವಂತೆ ಇಒಗೆ ಸೂಚಿಸಿದರಲ್ಲದೆ ಗ್ರಾಪಂಗಳು ಶಿಕ್ಷಣ, ಆರೋಗ್ಯ, ಗ್ರಂಥಾಲಯ ಕರ, ಭಿಕ್ಷುಕರ ಕರ ಪಾವತಿಸದಿರುವ ಬಗ್ಗೆ ಆಕ್ಷೇಪಣೆಯಿದೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಗ್ರಾಮ ಮಟ್ಟದ ಕಾರ್ಯಪಡೆಗಳ ಸಭೆ ನಡೆಸಬೇಕು, ಪ್ರಾಕೃತಿಕ ವಿಪತ್ತು ನಿರ್ವಹಣಾ ಸಮಿತಿ ರಚಿಸದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಪಂ.ಮುಖ್ಯ ಲೆಕ್ಕಾಧಿಕಾರಿ ಸಿ.ಎಂ.ಮುನಿಕೃಷ್ಣಪ್ಪ ಮಾತನಾಡಿ, ನರೇಗಾದಡಿ ಕೂಲಿ ಪಾವತಿ ವಿಳಂಬವಾಗುತ್ತಿದೆ. 2018-19ನೇ ಸಾಲಿನ 2656, 2019-20ನೇ ಸಾಲಿನ 2947 ಹಾಗೂ ಈ ಸಾಲಿನ 2927 ಸೇರಿ ಸುಮಾರು 10,000 ಕೆಲಸ ಬಾಕಿ ಇದ್ದು, ಕಳಪೆ ಸಾಧನೆ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕೂಡಲೇ ಬಾಕಿ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಕೆಲ ಪಿಡಿಒಗಳು ಸಭೆಗಳಿಗೂ ಹಾಜರಾಗುವುದಿಲ್ಲ, ಅನುದಾನ ಖರ್ಚು ವೆಚ್ಚಗಳ ಕುರಿತು ಮಾಹಿತಿ ನೀಡುತ್ತಿಲ್ಲ, ವಡಗೂರಿನಲ್ಲಿ 2 ವರ್ಷದಿಂದ ಜಮಾಬಂದಿ ನಡೆಸಿಲ್ಲ, 36 ಗ್ರಾಪಂ ಪೈಕಿ 21 ಗ್ರಾಪಂ ಹೊರತುಪಡಿಸಿ ಉಳಿದೆಡೆ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವೆ ಶೂನ್ಯ, ಇಂತಹ ಪಿಡಿಒಗಳ ಬಗ್ಗೆ ವರದಿ ನೀಡುವೆ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎನ್.ವಿ.ಬಾಬು, ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net