

ಎನ್.ಆರ್.ಪುರ: ತಾಲೂಕಿನ ಪಿಸಿಎಆರ್ಡಿ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಶೇ.80ರಷ್ಟು ಸಾಧನೆ ಮಾಡಿದ್ದು, ಸಾಲ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜಯಪಾಲ್ ತಿಳಿಸಿದರು.
ಕೃಷಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಿಸಿಎಆರ್ಡಿ ಬ್ಯಾಂಕ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ನಬಾರ್ಡ್ ನಿಯಮದಂತೆ ನಮ್ಮ ಬ್ಯಾಂಕ್ ಪ್ರಥಮ ದರ್ಜೆಯಲ್ಲಿದ್ದು ಎ ವರ್ಗದ ಬ್ಯಾಂಕ್ ಆಗಿದೆ. ಹೆಚ್ಚಿನ ಸಾಲ ವಸೂಲಾತಿಯಿಂದ ಶೇ.3ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಈ ವರ್ಷ ಸದಸ್ಯರಿಗೆ ನಬಾರ್ಡ್ ಯೋಜನೆಯಡಿ 3.11 ಕೋಟಿ ರೂ. ಹಾಗೂ ಸ್ವಂತ ಬಂಡವಾಳದಿಂದ 1.21 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ವ್ಯವಸ್ಥಾಪಕ ಎಚ್.ಎ.ಪ್ರದ್ಯುಮ್ನ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸದಸ್ಯರು ಷೇರುಗಳನ್ನು 1 ಸಾವಿರ ರೂ.ಗೆ ಏರಿಸಬೇಕಾಗಿದೆ. ಆಡಿಟ್ ವರದಿಯಲ್ಲೂ ಷೇರುಧನ ಹೆಚ್ಚಿಸಲು ಸಲಹೆ ನೀಡಿದ್ದಾರೆ. ಷೇರುಧನ ಹೆಚ್ಚಾಗುವುದರಿಂದ ದುಡಿಯುವ ಬಂಡವಾಳವೂ ಅಧಿಕವಾಗಲಿದೆ ಎಂದರು.