

ಶಿವರಾಜ ಎಂ. ಬೆಂಗಳೂರು
ಕರೊನಾ ಲಾಕ್‌ಡೌನ್ ಕಾರಣದಿಂದ ಯಾವಾಗ ಶಾಲೆಗಳು ಪುನರಾರಂಭವಾಗಲಿದೆ ಎಂಬ ಪ್ರಶ್ನೆ ನಡುವೆ ನಿಗದಿತ ಸಮಯದಲ್ಲಿ ಪಠ್ಯಪುಸ್ತಕ ವಿದ್ಯಾರ್ಥಿಗಳ ಕೈ ಸೇರಲಿದೆಯೇ ಎಂಬ ಆತಂಕವೂ ಕಾಡುತ್ತಿದೆ. ಆದರೆ ಈ ಬಗ್ಗೆ ಆತಂಕಪಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಭರವಸೆ ನೀಡಿದ್ದಾರೆ.
ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಬಹುತೇಕ ಮುಗಿದಿದ್ದು, ಶಾಲೆಗಳು ಆರಂಭವಾದ ಕೂಡಲೇ ವಿತರಣೆಗೆ ಇಲಾಖೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಲಾಕ್‌ಡೌನ್ ಸಡಿಲಿಕೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ನಿಗದಿಯಾಗದಿರುವ ಗೊಂದಲ ಇದೆ. ಆದ್ದರಿಂದ ಇದು 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಮೇಲೆ ತೊಡಕಾಗದಂತೆ ಎಚ್ಚರಿಕೆ ವಹಿಸಿದ್ದು, ಈಗಾಗಲೇ ಹಲವು ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡಿರುವ ಜತೆಗೆ ಶಾಲೆ ಆರಂಭವಾಗುತ್ತಿದ್ದಂತೆ ಪಠ್ಯಪುಸ್ತಕ ಪೂರೈಕೆಗೆ ಟೆಂಡರ್ ಮುಕ್ತಾಯಗೊಳಿಸಿದೆ. ಜತೆಗೆ ಒಂದು ಹಂತದ ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಮುದ್ರಣ ವೇಗ ಚುರುಕು: ಸರ್ಕಾರಿ, ಅನುದಾನ, ಅನುದಾನರಹಿತ ಸೇರಿ 1,327 ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಿದ್ದು 1,63,864 ವಿದ್ಯಾರ್ಥಿಗಳಿದ್ದಾರೆ. ಇವುಗಳಲ್ಲಿ ಹೊಸಕೋಟೆ ತಾಲೂಕಿನ 294 ಶಾಲೆಗಳಲ್ಲಿ 45,994 ಮಕ್ಕಳು, ದೊಡ್ಡಬಳ್ಳಾಪುರದ 439 ಶಾಲೆಗಳಲ್ಲಿ 43,689, ನೆಲಮಂಗಲ ತಾಲೂಕಿನ 356 ಶಾಲೆಗಳಲ್ಲಿ 36,438 ಹಾಗೂ ದೇವನಹಳ್ಳಿ 238 ಶಾಲೆಗಳಲ್ಲಿ 35,743 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಅವಶ್ಯಕತೆಗೆ ಅನುಗುಣವಾಗಿ ಕರ್ನಾಟಕ ಟೆಕ್ಸ್ಟ್‌ಬುಕ್ ಅಸೋಸಿಯೇಷನ್ ವತಿಯಿಂದ ಪಠ್ಯಪುಸ್ತಕ ಮುದ್ರಣ ಮಾಡಿರುವ ಬಗ್ಗೆ ಆಯಾ ಜಿಲ್ಲಾ ಡಿಡಿಪಿಐಗಳಿಗೆ ಮಾಹಿತಿ ರವಾನೆ ಮಾಡಲಾಗುತ್ತಿದೆ. ಈಗಾಗಲೇ ಶೇ.70 ಟೆಕ್ಸ್ಟ್‌ಬುಕ್ ಮುದ್ರಿಸಿ ಶಿಕ್ಷಣ ಇಲಾಖೆಯ ಗೋಡೌನ್‌ಗಳಿಗೆ ರವಾನಿಸಲಾಗಿದೆ. ಲಾಕ್‌ಡೌನ್ ತೆರವಾಗುತ್ತಿದ್ದಂತೆ ಮುದ್ರಣ ಕಾರ್ಯ ಮತ್ತೂ ವೇಗ ಪಡೆದುಕೊಳ್ಳಲಿದ್ದು, ನಿಗದಿತ ಅವಧಿಯೊಳಗೆ ಪಠ್ಯಪುಸ್ತಕ ವಿದ್ಯಾರ್ಥಿಗಳ ಕೈ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಕ್ ಬ್ಯಾಂಕ್‌ಗೆ ಸೂಚನೆ: ಪಠ್ಯಪುಸ್ತಕ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳ ಕೈ ಸೇರಿದರೂ ಇಂಡೆಂಟ್ ನೀಡುವುದು ಅಥವಾ ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಕೆಲವು ವಿಷಯಗಳ ಪುಸ್ತಕಗಳ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇರುವುದರಿಂದ ಎಲ್ಲ ಶಾಲೆಗಳಲ್ಲಿ ಬುಕ್ ಬ್ಯಾಂಕ್ ರಚನೆ ಮಾಡುವಂತೆ ಸೂಚಿಸಲಾಗಿದೆ. ಶಾಲೆಗಳು ಪ್ರಾರಂಭವಾದ ಕೂಡಲೇ ಬೋಧನೆ, ಕಲಿಕಾ ಪ್ರಕ್ರಿಯೆಗಳು ಆರಂಭವಾಗಬೇಕಿರುವುದರಿಂದ 2019-20ನೇ ಸಾಲಿನಲ್ಲಿ ಓದುತ್ತಿದ್ದ ಮಕ್ಕಳಿಂದ ಪಠ್ಯ ಪುಸ್ತಕಗಳನ್ನು ವಾಪಸ್ ಪಡೆದು ಪುಸ್ತಕ ಬ್ಯಾಂಕ್ ರಚಿಸಬೇಕು. ಪಾಲಕರು, ಮಕ್ಕಳಿಗೆ ಕರೆ ಮಾಡಿ ಪುಸ್ತಕ ವಾಪಸ್ ಪಡೆಯುವ ಜವಾಬ್ದಾರಿಯನ್ನು ಆಯಾ ತರಗತಿ ಶಿಕ್ಷಕರಿಗೆ ನೀಡುವಂತೆ ಸೂಚನೆ ನೀಡಲಾಗಿದೆ.
ಲಾಕ್‌ಡೌನ್ ಪಠ್ಯಪುಸ್ತಕ ಮುದ್ರಣಕ್ಕೆ ತಡೆಯಾಗಿಲ್ಲ. ಈಗಾಗಲೇ ಶೇ.70 ಪುಸ್ತಕಗಳು ಗೋಡೌನ್ ತಲುಪಿವೆ. ಶಾಲೆ ಆರಂಭವಾದ ಕೂಡಲೆ ಪಠ್ಯಪುಸ್ತಕ ಸಿಗಲಿದೆ. ಈ ಬಗ್ಗೆ ಪಾಲಕರು, ವಿದ್ಯಾರ್ಥಿಗಳು ಆತಂಕಪಡಬೇಕಿಲ್ಲ. ಕೃಷ್ಣಮೂರ್ತಿ, ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ