

ರಾಯಚೂರು: ಒಂದು ವಾರದೊಳಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ ಮಾಡಲಾಗುತ್ತಿದ್ದು, ಆರ್‌ಬಿಐಗೆ 12 ಜನರ ಪೇಮೆಂಟ್ ಆರ್ಡರ್ ಕಳುಹಿಸಿದ್ದು, ಇನ್ನೂ 20 ಲಕ್ಷ ಜನರಿಗೆ ವಾರದೊಳಗೆ ಪೇಮೆಂಟ್ ಆರ್ಡರ್ ಕಳುಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಹಿಂದೆ ಬರ ಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವರು. ಎಲ್ಲವನ್ನು ಸರಿಪಡಿಸಿ ಬೆಳೆ ಸಮೀಕ್ಷೆ ಆಧಾರದಲ್ಲಿ 25 ರಿಂದ 30 ಲಕ್ಷ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.
ಈ ಹಿಂದೆ ಬೆಳೆ ಬೆಳೆಯದವರಿಗೆ ಪರಿಹಾರ ಸಿಗುತ್ತಿತ್ತು. ಬೆಳೆ ಹಾನಿಗೊಳಗಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ. ಯಾರದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾದ ಪ್ರಕರಣಗಳು ನಡೆದಿವೆ. ಇದೆಲ್ಲವನ್ನು ಸರಿಪಡಿಸಲು ಎರಡು ತಿಂಗಳಾಗಿದ್ದು, ವಾರದೊಳಗೆ ಮೊದಲ ಕಂತಿನ ಹಣ ಪಾವತಿಸಲಾಗುತ್ತಿದೆ.
ಬರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅವರಿಂದ ಹಣ ಬಾರದಿರುವ ಕಾರಣ ರಾಜ್ಯ ಸರ್ಕಾರದಿಂದ ರೈತರಿಗೆ ತಲಾ 2 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ. ಮೊದಲ ಕಂತಿನ ಹಣ 800 ರಿಂದ 900 ಕೋಟಿ ರೂ. ಆಗುತ್ತದೆ. ಎನ್‌ಡಿಆರ್‌ಎ್, ಎಸ್‌ಡಿಆರ್‌ಎ್ ನಿಯಮಗಳ ಪ್ರಕಾರ ನೀಡುವ ಪರಿಹಾರ ರೈತರ ಖರ್ಚಿಗೆ ತಾಳೆ ಆಗುವುದಿಲ್ಲ. ನಿಯಮಗಳ ಪರಿಷ್ಕರಣೆಗೆ ಮನವಿ ಮಾಡಲಾಗಿದೆ.
1,500 ಗ್ರಾಮ ಲೆಕ್ಕಾಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸಚಿವ ಸಂಪುಟ ಸಭೆ ಒಪ್ಪಿಗೆ ಪಡೆಯಬೇಕಾಗಿದೆ. ೆಬ್ರವರಿಯಲ್ಲಿ ಹುದ್ದೆ ಭರ್ತಿ ಪ್ರಕ್ರಿಯೆ ನಡೆಸಲಾಗುವುದು. 357 ಸರ್ವೇಯರ್ ಹುದ್ದೆಗಳನ್ನು ತುಂಬಲಾಗುತ್ತಿದ್ದು, ಇನ್ನೂ 590 ಹುದ್ದೆ ತುಂಬಲು ಇನ್ನೊಂದು ತಿಂಗಳಲ್ಲಿ ಅನುಮತಿ ಸಿಗಲಿದೆ.
ರಾಜ್ಯದ 31 ಜಿಲ್ಲೆಗಳ 31 ತಾಲೂಕುಗಳಲ್ಲಿ ದಾಖಲೆಗಳನ್ನು ಡಿಜಿಟಲೈಜ್ ಮಾಡಲಾಗುತ್ತಿದ್ದು, ಆರು ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಡಿಜಿಟಲೀಕರಣವನ್ನು ವಿಸ್ತರಿಸಲಾಗುವುದು. ಕಂದಾಯ ಇಲಾಖೆಯಲ್ಲಿನ ದಿನನಿತ್ಯದ ಕೆಲಸಗಳು ವಿಳಂಬವಾಗುತ್ತಿದೆ ಎನ್ನುವ ದೂರುಗಳಿದ್ದು, ಬರ ನಿರ್ವಹಣೆಗೆ ಇಲಾಖೆಯನ್ನು ಸನ್ನದ್ಧಗೊಳಿಸಲಾಗುತ್ತಿದೆ.
ತಾಂಡಾ, ಹಟ್ಟಿ, ಕ್ಯಾಂಪ್, ಸ್ಥಳಾಂತರಗೊಂಡ ಗ್ರಾಮಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುತ್ತಿದ್ದು, ಸ್ಥಳಾಂತರಗೊಂಡ ಪ್ರವಾಹ ಪೀಡಿತ ಗ್ರಾಮಗಳಲ್ಲಿನ ಜನರು ಸ್ಥಳಾಂತರಗೊಂಡ ಸ್ಥಳಕ್ಕೆ ಹೋಗದಿರುವ ಸಮಸ್ಯೆಯಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೃಷ್ಣ ಭೈರೇಗೌಡ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಹಂಪಯ್ಯ ನಾಯಕ, ಬಸನಗೌಡ ದದ್ದಲ್, ಬಸವನಗೌಡ ತುರ್ವಿಹಾಳ ಉಪಸ್ಥಿತರಿದ್ದರು.