43 ಕೋಟಿ ರೂ. ಪ್ರೀಮಿಯಂ ಸಂಗ್ರಹ : ದ.ಕ.ರೈತರಿಂದ ಸಕಾರಾತ್ಮಕ ಸ್ಪಂದನೆ

New Project (37)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಈ ಬಾರಿಯ ಬೆಳೆ ವಿಮೆಯ ಪ್ರೀಮಿಯಂ ಪಾವತಿ ದಿನಾಂಕ ಆ.31ಕ್ಕೆ ಕೊನೆಗೊಂಡಿದ್ದು, ದ.ಕ. ಜಿಲ್ಲೆಯಲ್ಲಿ 1,41,708 ರೈತರು 43,66,79,000 ರೂ. ಪ್ರೀಮಿಯಂ ಪಾವತಿಸಿದ್ದಾರೆ.

ಈ ಬಾರಿಯ ಬೆಳೆ ವಿಮೆಯ ಮೊದಲ ಆದೇಶದಲ್ಲಿ ಕಂತು ಪಾವತಿಗೆ ಜುಲೈ 31 ಕೊನೇ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಹೆಚ್ಚಿನ ರೈತರು ಸದುಪಯೋಗ ಪಡೆಯುವುದಕ್ಕಾಗಿ ಆ.31ರವರೆಗೆ ಪ್ರೀಮಿಯಂ ಪಾವತಿಗೆ ದಿನಾಂಕ ವಿಸ್ತರಿಸಲಾಗಿತ್ತು.

ಸಹಕಾರ ಸಂಘ ಈ ಯೋಜನೆಗೆ ಹೆಚ್ಚಿನ ಕೃಷಿಕ ಸದಸ್ಯರು ಒಳಪಡಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಚಾರ ನೀಡುವುದರ ಜತೆ ಹೆಚ್ಚಿನ ಕೆಲಸ ಮಾಡಿದ್ದವು. ಸಹಕಾರ ಸಂಘಗಳ ಈ ಪ್ರಯತ್ನದಿಂದ ಕೆಲವೊಂದು ಸೊಸೈಟಿಗಳಲ್ಲಿ ಆರ್‌ಟಿಸಿ ಹೊಂದಿರುವ ಶೇ.100ರಷ್ಟು ಸದಸ್ಯರು ವಿಮೆಯ ಪ್ರೀಮಿಯಂ ಪಾವತಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿಮೆ ಪ್ರೀಮಿಯಂ ಪಾವತಿಗೆ ಅವಕಾಶವಿದ್ದು, ಅಲ್ಲಿ ಹೆಚ್ಚಿನ ಉತ್ಸಾಹ ಕಂಡುಬರದ ಕಾರಣ ರೈತರು ಸಾಮಾನ್ಯವಾಗಿ ಸಹಕಾರ ಸಂಘಗಳ ಮೂಲಕ ಪ್ರೀಮಿಯಂ ಪಾವತಿಸುತ್ತಾರೆ. ಸಹಕಾರ ಸಂಘಗಳಲ್ಲಿ ಪ್ರೀಮಿಯಂ ಪಾವತಿಯಾದರೂ ಬೆಳೆ ವಿಮೆಯ ಮೊತ್ತ ಜಮೆಯಾಗುವುದು ಕೃಷಿಕನ ರಾಷ್ಟ್ರೀಕೃತ ಬ್ಯಾಂಕ್ ಖಾತೆಗೆ. ಈ ಕಾರಣದಿಂದ ಈ ಯೋಜನೆ ಸಹಕಾರ ಸಂಘಗಳು ತನ್ನ ಸದಸ್ಯರಿಗೆ ನೀಡುವ ಹೆಚ್ಚಿನ ಸೇವೆ.

ಜಿಲ್ಲೆಯಲ್ಲಿ ಅಡಕೆ, ಕಾಳುಮೆಣಸಿಗೆ ಮಾತ್ರ ಸೀಮಿತವಾಗಿರುವ ಬೆಳೆ ವಿಮೆ ಯೋಜನೆಯಲ್ಲಿ ಅಡಕೆಯ ಪ್ರತಿ ಎಕರೆಗೆ 2,590 ರೂ., ಕಾಳುಮೆಣಸಿನ ಪ್ರತಿ ಎಕರೆಗೆ 951 ರೂ. ವಿಮಾ ಮೊತ್ತ ನಿಗದಿಯಾಗಿದೆ. ರೈತರು ತಾವು ಕಟ್ಟಿದ ಪ್ರೀಮಿಯಂ ಮೊತ್ತದ ಅನೇಕ ಪಾಲು ವಿಮೆಯನ್ನು ಪ್ರದೇಶದ ಮಳೆ, ಹವಾಮಾನದ ಆಧಾರದಲ್ಲಿ ಪಡೆಯುತ್ತಾರೆ. ಈ ಯೋಜನೆ ಪ್ರಾರಂಭದ ವರ್ಷ ಅಡಕೆಯ ಹೆಕ್ಟೇರ್ ಒಂದಕ್ಕೆ ಗರಿಷ್ಠ 1,28,000 ರೂ. ವಿಮಾ ಮೊತ್ತ ದೊರಕಿದ್ದರೆ ಬಳಿಕದ ವರ್ಷಗಳಲ್ಲಿ ಇದು 60ರಿಂದ 70 ಸಾವಿರ ರೂ.ಗಳಿಗೆ ಸೀಮಿತವಾಗಿತ್ತು. ಬೆಳ್ತಂಗಡಿ ತಾಲೂಕಿನಿಂದ 30,393 ರೈತರು ಅತ್ಯಧಿಕ 10,04,24,000 ರೂ. ಪ್ರೀಮಿಯಂ ಮೊತ್ತ ಪಾವತಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಮೂಲ್ಕಿಯಲ್ಲಿ 108 ರೈತರು 3,63,000 ರೂ. ವಿಮೆ ಮೊತ್ತ ಪಾವತಿಸಿದ್ದು ಇದು ಜಿಲ್ಲೆಯಲ್ಲಿ ಕಡಿಮೆ ಮೊತ್ತ.

ಬೇಗ ಬಿಡುಗಡೆಗೆ ರೈತರ ಆಗ್ರಹ

2024ರ ಮಳೆಗಾಲದಲ್ಲಿ ಭಾರಿ ಮಳೆಯಾಗಿದ್ದು ಅಡಕೆ, ಕಾಳುಮೆಣಸು ಕೃಷಿಕರು ನಷ್ಟ ಅನುಭವಿಸಿ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಈ ಕಾರಣದಿಂದ ಈ ಬಾರಿ ಬೆಳೆ ವಿಮೆಯ ಮೊತ್ತ ಬೇಗನೆ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಿಂದ ಜನವರಿ ತಿಂಗಳು ಮೊತ್ತ ಖಾತೆಗೆ ಜಮೆಯಾಗುತ್ತದೆ. ಆದರೆ ಹೆಚ್ಚಿನ ರೈತರು ಈ ಬಾರಿ ಬೆಳೆ ನಷ್ಟ ಅನುಭವಿಸಿದ್ದಾರೆ. 2025ರ ಮಳೆಗಾಲದಲ್ಲಿ ಹೆಚ್ಚಿನ ಮಳೆ ಸುರಿದು ಶೇ.70ಕ್ಕಿಂತ ಅಧಿಕ ಫಸಲು ನಷ್ಟವಾಗಿದೆ. ಈ ಕಾರಣದಿಂದ ಶೀಘ್ರ ಬೆಳೆ ವಿಮೆ ಬಿಡುಗಡೆಗೊಂಡರೆ ರೈತರಿಗೆ ನೆರವಾಗಲಿದೆ.

ತಾಲೂಕುವಾರು ಪ್ರೀಮಿಯಂ ಪಾವತಿ ವಿವರ

ಪ್ರೀಮಿಯಂ ಪಾವತಿಸಿದ ರೈತರ ಸಂಖ್ಯೆ-ಪಾವತಿಸಿದ ಮೊತ್ತ(ರೂ.ಗಳಲ್ಲಿ)

  • ಮಂಗಳೂರು-722-27,25,000 ರೂ.,
  • ಬಂಟ್ವಾಳ-20,125-6,95,73,000 ರೂ.
  • ಬೆಳ್ತಂಗಡಿ-30,393-10,04,24,000 ರೂ.,
  • ಪುತ್ತೂರು-26,159-7,54,40,000 ರೂ.,
  • ಸುಳ್ಯ-31,905-9,65,61,000 ರೂ.,
  • ಮೂಡುಬಿದಿರೆ -2,132-92,62,000 ರೂ.,
  • ಕಡಬ-28,973-7,83,28,000 ರೂ.,
  • ಮೂಲ್ಕಿ-108-3,63,000 ರೂ.,
  • ಉಳ್ಳಾಲ-1191-40,03,000 ರೂ.,
  • ಒಟ್ಟು-141708-43,66,79,000 ರೂ.

ನಮ್ಮ ಸಂಘದಲ್ಲಿ 25 ಲಕ್ಷ ರೂ. ಗಿಂತ ಅಧಿಕ ಬೆಳೆ ವಿಮೆ ಪ್ರೇಮಿಯಂ ಮೊತ್ತ ಸಂಗ್ರಹಗೊಂಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಅಧಿಕವಾಗಿದೆ. ಅದಕ್ಕೆ ಕಾಲು ಮೆಣಸು ಕೃಷಿ ಹೊಂದಿರುವ ಸಂಘದ ವ್ಯಾಪ್ತಿಯ ಪ್ರತಿ ಸದಸ್ಯರನ್ನು ಈ ಯೋಜನೆಗೆ ಒಳಪಡಿಸಲಾಗಿದೆ. ಪ್ರಕಾಶ ನಾರಾಯಣ್ ರಾವ್ ಮುಂಡಾಜೆ ಪ್ಯಾಕ್ಸ್ ಅಧ್ಯಕ್ಷ https://www.vijayavani.net/science-fair-welcome-committee-formation-meeting https://www.vijayavani.net/gold-in-taekwondo-championship

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net