

ಶಿವಮೊಗ್ಗ: ಕಾಂಗ್ರೆಸ್‌ನವರು ಸಾರ್ವಜನಿಕವಾಗಿ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ಅತ್ಯಂತ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗೆ ಗೌರವ ಕೊಡಬೇಕೆಂಬ ಕನಿಷ್ಠ ಸೌಜನ್ಯವೂ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಇಲ್ಲದಂತಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಡಬ್ಬದಂತೆ ಕಾಂಗ್ರೆಸ್‌ನವರು ಸುಮ್ಮನೇ ಶಬ್ಧ ಮಾಡುತ್ತಿದ್ದಾರೆ. ಕಮೀಷನ್ ಪಡೆದಿರುವುದಕ್ಕೆ, ಭ್ರಷ್ಟಾಚಾರ ನಡೆದಿರುವುದಕ್ಕೆ ಸೂಕ್ತ ಸಾಕ್ಷೃಗಳಿದ್ದರೆ ಸದನದಲ್ಲಿ ಅದರ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ಸಾರ್ವಜನಿಕ ಸ್ಥಳದಲ್ಲಿ ಸಿಎಂ ವಿರುದ್ಧ ಪೋಸ್ಟರ್ ಅಂಟಿಸುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಆ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬುದ್ದಿ ಹೇಳಬೇಕಿತ್ತು. ಅದನ್ನು ಬಿಟ್ಟು ಇವರಿಬ್ಬರೂ ನಾವೂ ಪೋಸ್ಟರ್ ಅಂಟಿಸುತ್ತೇವೆ ಎಂದು ಹೇಳುತ್ತಿರುವುದು ಅತಿರೇಕದ ಪರಮಾವಧಿಯಾಗಿದೆ ಎಂದರು.
ಮುಂದಿನ ಚುನಾವಣೆಗಾಗಿ ಕಾಂಗ್ರೆಸ್ ಇಂತಹ ನಾಟಕ ಮಾಡುತ್ತಿದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಹಿಂದಿನ ಚುನಾವಣೆಯಲ್ಲಿ ಪಡೆದಿದ್ದ ಮತಗಳ ಪೈಕಿ ಶೇ.40ರಷ್ಟು ಮತವೂ ಕಾಂಗ್ರೆಸ್‌ಗೆ ಸಿಗುವುದಿಲ್ಲ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಕೃಪಾಪೋಷಿತವಾಗಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಪತ್ರ ಬರೆದು ಶೇ.40 ಕಮೀಷನ್ ಆರೋಪ ಮಾಡುವ ಕೆಂಪಣ್ಣ ಸೂಕ್ತ ದಾಖಲೆ ಬಿಡುಗಡೆ ಮಾಡಲಿ ಎಂದು ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
ವಿಧಾನ ಮಂಡಲದ ಅಧಿವೇಶನದಲ್ಲೇ ಕಾಂಗ್ರೆಸ್‌ನವರು ಶೇ.40 ಕಮೀಷನ್ ಆರೋಪದ ಬಗ್ಗೆ ಚರ್ಚೆ ಮಾಡಬಹುದಿತ್ತು. ಆದರೆ ಸದನದಲ್ಲಿ ಚರ್ಚೆ ಮಾಡಲು ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಸುಮ್ಮನಿದ್ದಾರೆ. ವೃಥಾ ಟೀಕೆ ಮಾಡುವುದು, ಪತ್ರ ಬರೆಯುವುದನ್ನು ಬಿಟ್ಟು ಆರೋಪಕ್ಕೆ ಸಾಕ್ಷಿನೀಡುವ ಕೆಲಸ ಮಾಡಲಿ ಎಂದು ಹೇಳಿದರು.