

ಪಿರಿಯಾಪಟ್ಟಣ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ನಮ್ಮ ದೇಶದ ಸೈನ್ಯದ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿದ್ದೇವೆ ಎಂದು ರಾವಂದೂರಿನ ಮುರುಘಾ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ತಿಳಿಸಿದರು.
ತಾಲೂಕು ಬಿಜೆಪಿ, ಜೆಡಿಎಸ್ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಶನಿವಾರ ಆಯೋಜಿಸಿದ್ದ ತಿರಂಗಾ ಯಾತ್ರೆಗೆ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವೀರಯೋಧ ದಿ.ಬೆಳ್ಳಿಯಪ್ಪ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಹಗಲಿರುಳು ಎನ್ನದೆ ದೇಶದ ಗಡಿ ಭಾಗಗಳಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರಿಗೆ ನಾವು ಗೌರವ ನೀಡಬೇಕಿದೆ ಎಂದರು. ಆಪರೇಷನ್ ಸಿಂಧೂರ ಕಾರ್ಯ ಪ್ರವೃತ್ತಿಯಲ್ಲಿ ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ್ದಾರೆ. ಆದ್ದರಿಂದ ಭಾರತೀಯ ಸೈನಿಕರ ಜತೆ ನಾವಿದ್ದೇವೆ ಎಂಬ ಆತ್ಮಸ್ಥೈರ್ಯವನ್ನು ತುಂಬಲು ತಾಲೂಕಿನಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿ, ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಅಮಾನುಷವಾಗಿ ಕೊಂದು ಹಾಕಿ ಕ್ರೂರತ್ವವನ್ನು ಪ್ರದರ್ಶಿಸಿದ ಪಾಕಿಸ್ತಾನಿ ಉಗ್ರಗಾಮಿಗಳಿಗೆ ಭಾರತೀಯ ಸೇನೆ ದಾಳಿಯ ಮೂಲಕ ತಕ್ಕ ಉತ್ತರವನ್ನು ನೀಡಿದೆ ಎಂದರು.
ಪಕ್ಷಾತೀತ ಮತ್ತು ಧರ್ಮಾತೀತವಾಗಿ ಭಾರತೀಯ ಯೋಧರಿಗೆ ಧೈರ್ಯ ತುಂಬುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುವ ಹುನ್ನಾರ ಮಾಡುತ್ತಿದ್ದು, ರಾಷ್ಟ್ರದಾದ್ಯಂತ ಉಗ್ರರನ್ನು ದೇಶದೊಳಕ್ಕೆ ನುಸುಳಿಸಿ ದೇಶದ ವಿವಿಧಡೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕಿದೆ ಎಂದರು.
ಭಾರತೀಯ ಸೈನಿಕರು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿ 9 ಕ್ಕೂ ಹೆಚ್ಚು ಭಯೋತ್ಪಾದಕ ತಾಣಗಳನ್ನು ನಾಶಪಡಿಸಿದ್ದಾರೆ ಹಾಗೂ ಭಾರತವನ್ನು ಕೆಣಕಿದರೆ ಮುಂದಾಗುವ ತೊಂದರೆಯ ಬಗ್ಗೆ ವಿಶ್ವಕ್ಕೆ ತಿಳಿಸಿಕೊಟ್ಟಿದ್ದಾರೆ ಎಂದರು.
ಮುಂಜಾನೆಯಿಂದಲೇ ಚುರುಕುಗೊಂಡ ಮುಂಗಾರು ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಿಂದ ತಿರಂಗಾ ಯಾತ್ರೆ ಆರಂಭಿಸಿ ಬಿ.ಎಂ.ರಸ್ತೆಯ ಮೂಲಕ ಎಪಿಎಂಸಿ ಆವರಣದವರೆಗೆ ತೆರಳಿದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಶಾಸಕರಾದ ಕೆ.ಮಹದೇವ್, ಎಚ್.ಸಿ.ಬಸವರಾಜ್, ಟಿಬೆಟಿಯನ್ ಬೈಲುಕುಪ್ಪೆ ಲಾಮ ಕ್ಯಾಂಪಿನ ಧರ್ಮಗುರು ಕರ್ಮ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಪುರಸಭೆ ಅಧ್ಯಕ್ಷ ಪ್ರಕಾಶ ಸಿಂಗ್, ಮುಖಂಡರಾದ ಪಿ.ಪ್ರಶಾಂತ್ ಗೌಡ, ಕೆ.ಎನ್.ಸೋಮಶೇಖರ್, ಕಿರಣ್ ಜಯರಾಮ್, ಆರ್.ಟಿ.ಸತೀಶ್, ಎಂ.ಎಂ.ರಾಜೇಗೌಡ, ನಳಿನಿ, ರಮೇಶ್, ಶುಭಾಗೌಡ, ಲೋಕಪಾಲಯ್ಯ, ಕೆ.ಕೆ.ಶಶಿ, ಜಿ.ಸಿ.ವಿಕ್ರಂ ರಾಜ್, ಪಿ.ಸಿ.ಕೃಷ್ಣ, ಮಂಜುನಾಥ್ ಸಿಂಗ್ ಇತರರು ಇದ್ದರು.