

ಕಂಪ್ಲಿ: ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಇಲ್ಲಿನ ತುಂಗಭದ್ರಾ ಟಾಸ್ಕ್ ವರ್ಕರ್ ಬಲದಂಡೆ ಕಾಲುವೆಗಳ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ನೀರಾವರಿ ನಿಗಮ ಉಪ ವಿಭಾಗ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಡಿ.ಆರ್.ಪಾಂಡುರಂಗ ಮಾತನಾಡಿ, ಕಂಪ್ಲಿ ನಂ.1 ಕಾಲುವೆ ಉಪವಿಭಾಗದಲ್ಲಿ 80 ಜನ ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, ಆಗಸ್ಟ್‌ನಿಂದ ಸಂಬಳ ನೀಡಿಲ್ಲ. ಅಧಿಕಾರಿ, ಗುತ್ತಿಗೆದಾರರಿಗೆ ಮೌಖಿಕವಾಗಿ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ನ.15ರೊಳಗೆ ವೇತನ ನೀಡದಿದ್ದರೆ ನ.19ರಿಂದ ಎಚ್‌ಎಲ್‌ಸಿ, ಎಲ್‌ಎಲ್‌ಸಿಗಳಲ್ಲಿ ನೀರು ನಿರ್ವಹಣೆ ನಿಲ್ಲಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ವಿ.ಮಾರೇಶ, ಜಡೆಪ್ಪ, ಜಡೆ ರಾಜಕುಮಾರ್, ಹನುಮನಾಯಕ, ವೆಂಕಟೇಶ, ಜಡೇಮೂರ್ತಿ ಇತರರಿದ್ದರು.