

ಹುಬ್ಬಳ್ಳಿ: ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜ್ಗಳಿಂದಲೇ ಸಿಬ್ಬಂದಿಗೆ ನೇರವಾಗಿ ಸಂಬಳ ಪಾವತಿಸಲು ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಇಲಾಖೆಯ ನಿರ್ದೇಶಕರಿಗೆ ಭಾನುವಾರ ಸೂಚಿಸಿದರು.
ಈ ಮೊದಲು ಸ್ವಾಯತ್ತ ಸಂಸ್ಥೆಗಳಿಂದಲೇ ಸಿಬ್ಬಂದಿಗೆ ಸಂಬಳ ಪಾವತಿಯಾಗುತ್ತಿತ್ತು. ಈಗ ಎಚ್ಆರ್ಎಂಎಸ್ನಿಂದ ಪಾವತಿಸಲಾಗುತ್ತಿದ್ದು, ಅದೂ ವಿಳಂಬವಾಗುತ್ತಿದೆ. ನಿರ್ದೇಶಕರು, ಸಿಎಒ, ಆರ್ಥಿಕ ಸಲಹೆಗಾರರ ಮೂಲಕ ಸಂಬಳ ಪಾವತಿಗೆ ಸೂಚಿಸಬೇಕು ಎಂದು ಇಲ್ಲಿನ ಕಿಮ್್ಸ ವೈದ್ಯರ ಸಂಘದ ಪದಾಧಿಕಾರಿಗಳು ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು, ಡಿಎಂಇ ನಿರ್ದೇಶಕರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.
ಕೆಲವರಿಗೆ ಮುಂಬಡ್ತಿ ಆಗಿದ್ದರೂ ಕೆಲವೆಡೆ ತಕ್ಕುದಾದ ಹುದ್ದೆಗಳು ಖಾಲಿ ಇರುವುದಿಲ್ಲ. ಅಲ್ಲಿಯೇ ಮುಂಬಡ್ತಿ ನೀಡಬೇಕು, ಜತೆಗೆ ಅದಕ್ಕೆ ಸರಿಯಾಗಿ ವೇತನವನ್ನೂ ಪಾವತಿಸಬೇಕು ಎಂದು ಪದಾಧಿಕಾರಿಗಳು ಕೇಳಿಕೊಂಡಾಗ, ಈ ಸಮಸ್ಯೆ ಬಗೆಹರಿಸಿ ಎಂದು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅವರಿಗೆ ಸೂಚಿಸಿದರು.
6ನೇ ವೇತನ ಆಯೋಗದ ಹಿಂಬಾಕಿ ಪಾವತಿಗೆ ಸಂಬಂಧಿಸಿರುವ ಸಮಸ್ಯೆ ಬಗೆಹರಿಸುವಂತೆ ಸಂಘದ ಪದಾಧಿಕಾರಿಗಳಾದ ಡಾ.ಎಸ್.ಎಸ್. ಶಿರೋಳ, ಡಾ.ಕೆ.ಎಫ್. ಕಮ್ಮಾರ, ಡಾ. ಮಂಜುನಾಥ ನೇಕಾರ ವಿನಂತಿಸಿದರು. ಹಣಕಾಸು ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಿ ಹಿಂಬಾಕಿ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.