

ಹೂವಿನಹಡಗಲಿ: ತಾಲೂಕಿನ 26 ಗ್ರಾಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ ತೆರಿಗೆ ವಸೂಲಾತಿ ಅಭಿಯಾನ ಆರಂಭಿಸಿದ್ದು, ಶೇ.25 ವಸೂಲಿಯಾಗಿದೆ ಎಂದು ತಾಪಂ ಇಒ ಉಮೇಶ್ ಮೈನಹಳ್ಳಿ ಹೇಳಿದರು.
ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಶುಕ್ರವಾರ ತೆರಿಗೆ ವಸೂಲಾತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಒಟ್ಟು 3.5 ಕೋಟಿ ರೂ. ತೆರಿಗೆಯಲ್ಲಿ ಶೇ.25 ಪಾವತಿಯಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಇತರ ಸೌಲಭ್ಯಗಳನ್ನು ಒದಗಿಸಲು ತೆರಿಗೆಯ ಹಣವೂ ಮುಖ್ಯವಾಗಿದೆ.
ಈಗಾಗಲೇ ಉಳಿದ ಮೊತ್ತ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳಲ್ಲಿ ಒಂದು ತಿಂಗಳ ಕಾಲ ಅಭಿಯಾನ ಆರಂಭಿಸಲಾಗಿದೆ. ತೆರಿಗೆ ಪಾವತಿಸದಿದ್ದರೆ ಗ್ರಾಮ ಅಭಿವೃದ್ಧಿ ಸೇರಿ ಇತರ ಸೌಕರ್ಯ ಕಲ್ಪಿಸಲು ಕಷ್ಟವಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ತೆರಿಗೆ ಪಾವತಿಸಿದರೆ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸಲು ಅನುಕೂಲವಾಗುತ್ತದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಅಶೋಕ ತೋಟದ, ಗ್ರಾಪಂ ಕಾರ್ಯದರ್ಶಿ ವೀರೇಶ್, ತಾಪಂ ಸಹಾಯಕ ನಿರ್ದೇಶಕ ಹೇಮಾದ್ರಿನಾಯ್ಕ, ಗ್ರಾಪಂ ನೋಡಲ್ ಅಧಿಕಾರಿ ಚಂದ್ರಶೇಖರಯ್ಯ ಇತರರಿದ್ದರು.