

ಸಿಂಧನೂರು: ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ (ಸಫಾಯಿ ಕರ್ಮಚಾರಿಗಳು) ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ವಿಭಾಗೀಯ ಸಂಚಾರ ಅಧಿಕಾರಿ ಪ್ರಕಾಶ ದೊಡ್ಡಮನಿಗೆ ಮನವಿ ಸಲ್ಲಿಸಿತು.
ಕಾರ್ಮಿಕರ ಹಕ್ಕುಗಳಿಗೆ ಮತ್ತು ಅವರ ಘನತೆಗಾಗಿ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. 2002ರಿಂದಲೂ ಸ್ವಚ್ಛತಾ ಕಾರ್ಮಿಕರು ಗುತ್ತಿಗೆ ಆಧಾರ ಮೇಲೆ ಸಿಂಧನೂರು ಬಸ್ ನಿಲ್ದಾಣದ ಆವರಣವನ್ನು ಸ್ವಚ್ಛಗೊಳಿಸುವ ನಿರ್ವಹಣೆಯ ವಿಭಾಗದಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾನೂನು ಬದ್ಧವಾಗಿ ನೀಡಬೇಕಾದ ಸೇವಾ ಸೌಲಭ್ಯಗಳನ್ನು ದಲಿತ ಕಾರ್ಮಿಕರಿಗೆ ನೀಡದೇ ವಂಚಿಸಲಾಗುತ್ತಿದೆ. ಅದಕ್ಕಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಏಕಾಏಕಿ ವಜಾಗೊಳಿಸಿದ್ದು ಕಾನೂನು ಬಾಹಿರವಾಗಿದೆ.
ಗುತ್ತಿಗೆದಾರ ರಾಜೇಶ್ ಏಜೆನ್ಸಿ ನಿಯಮ-ನಿಬಂಧನೆ ಮತ್ತು ಷರತ್ತು ಉಲ್ಲಂಘಿಸಿ ಸ್ವಚ್ಛತಾ ದಲಿತ ಮಹಿಳಾ ಕಾರ್ಮಿಕರಿಗೆ ವಂಚಿಸಿದ್ದು ಈ ಕೂಡಲೇ ಟೆಂಡರ್ ರದ್ದುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ಬಾಕಿ ವೇತನವನ್ನು ತಕ್ಷಣದಲ್ಲೇ ಪಾವತಿ ಮಾಡಬೇಕು.
ಪ್ರತಿ ತಿಂಗಳ 7 ತಾರೀಖಿನೊಳಗೆ ವೇತನ ಪಾವತಿಸಿ, ವೇತನದ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ ಅಧಿಸೂಚನೆಯಂತೆ ಸುರಕ್ಷಾ ಕವಚಗಳನ್ನು ನೀಡಬೇಕು. ಕಾರ್ಮಿಕರಿಗೆ ಇಎಸ್‌ಐ-ಪಿಎಫ್ ಸೌಲಭ್ಯಕೂಡಲೇ ನೀಡಬೇಕು. ವಾರದ ರಜೆ, ರಾಷ್ಟ್ರೀಯ ಹಾಗೂ ಹಬ್ಬದ ರಜೆಗಳನ್ನು ಘೋಷಣೆ ಮಾಡಬೇಕು. ಹೆಚ್ಚುವರಿ ಅವಧಿ ಕೆಲಸಕ್ಕೆ ಇಮ್ಮಡಿ ವೇತನ ಪಾವತಿ ಮಾಡಬೇಕು. ಕಾರ್ಮಿಕರಿಗೆ ಗುತ್ತಿಗೆದಾರಿಂದ ನಿರಂತರ ಕಿರುಕುಳ, ದೌರ್ಜನ್ಯ ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.