

ಆಲಮೇಲ: ಪಟ್ಟಣ ವ್ಯಾಪ್ತಿಯ ಎಲ್ಲ ಆಸ್ತಿ ಮಾಲೀಕರು, ಸಾರ್ವಜನಿಕರು, ಅನುಭೋಗದಾರರು ಕೂಡಲೇ 2025/26ನೇ ಸಾಲಿನ ಹಾಗೂ ಹಿಂದಿನ ವರ್ಷದ ಆಸ್ತಿ ತೆರಿಗೆ, ನೀರಿನ ಕರ, ವಾಣಿಜ್ಯ ಮಳಿಗೆಗಳ ಬಾಡಿಗೆ ಕಟ್ಟಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಾರ್ವಜನಿಕರಲಿ ಪಪಂ ಮುಖ್ಯಾಧಿಕಾರ ಸುರೇಶ ನಾಯಕ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ವತಿಯಿಂದ 2025-26ನೇ ಸಾಲಿನ ತೆರಿಗೆ ವಸೂಲಾತಿ ಕುರಿತು ಪಟ್ಟಣದ ಮನೆ ಮನೆಗಳಿಗೆ ತೆರಳಿ ಸಾರ್ವಜನಿಕರಿಗೆ ಜಾಥಾ ಮೂಲಕ ಜಾಗೃತಿ ಅಭಿಯಾನದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 36 ಲಕ್ಷ ರೂ. ತೆರಿಗೆಯಲ್ಲಿ 25 ಲಕ್ಷ ರೂ. ಪಾವತಿಯಾಗಿದೆ. ಇನ್ನೂ 25 ಲಕ್ಷ ರೂಗಳು ಬಾಕಿ ಇದ್ದು, ಆದ್ದರಿಂದ ಸಾರ್ವಜನಿಕರು ಕೂಡಲೇ ತೆರಿಗೆ ಪಾವತಿಸಿ ಸಹಕರಿಸಬೇಕೆಂದು ತಿಳಿಸಿದರು.
ಪಪಂ ಅಧ್ಯಕ್ಷ ಸಾಧೀಕ ಸುಂಬಡ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸುವ ಮುನ್ನ ಪಪಂ ವತಿಯಿಂದ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಆದರೂ ಕೆಲವರು ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಿಸುತ್ತಿದ್ದು, ಅಂತವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಪಪಂ ಎಸ್.ಡಿ.ಎ. ಲಾಲಸಾಬ ದೇವರಮನಿ, ಇಂಜಿನಿಯರ್ ಅಜರ ನಾಟೀಕಾರ, ಅರೋಗ್ಯ ನಿರೀಕ್ಷಕಿ ಕು. ತೇಜಶ್ವಿನಿ ಮಗಿ, ಪಪಂ ಸದಸ್ಯರ ಪ್ರತಿನಿಧಿಗಳಾದ ಶ್ರೀಶೈಲ ಭೋವಿ, ಶಿವು ರಜಪೂತ, ಸಂತೋಷ ಜರಕರ, ಸಿಬ್ಬಂದಿ ಯುವರಾಜ ರಜಪೂತ, ಮಂಜು ಲಾಳಸಂಗಿ, ಸೈಫನ್ ವಡಗೇರಿ, ರೇಣುಕಾ ಯಂಟಮಾನ ಹಾಗೂ ಪೌರಕಾರ್ಮಿಕರು ಜಾಥಾದಲ್ಲಿದ್ದರು.