ಸಾಧನೆ ಮೂಲಕ ತಂದೆ-ತಾಯಿ ಋಣ ತೀರಿಸಿ

VJP-Exlent
ವಿಜಯಪುರ ನಗರ ಹೊರವಲಯದಲ್ಲಿರುವ ಎಕ್ಸಲೆಂಟ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರನ್ನು ಗೌರವಿಸಲಾಯಿತು. ಆದಾಯಕರ ಇಲಾಖೆ ಅಧಿಕಾರಿ ಆರ್.ಬಿ. ಕಬ್ಬಲಗೇರಿ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ, ಸಂಸ್ಥೆ ಸಂಸ್ಥಾಪಕ ಪ್ರ. ಕಾರ್ಯದರ್ಶಿ ಶಿವಾನಂದ ಕೆಲೂರ, ದಯಾನಂದ ಕೆಲೂರ, ಅನಿಲಕುಮಾರ ಅಂಕದ ಇತರರಿದ್ದಾರೆ.
Published on

ವಿಜಯಪುರ: ತಂದೆ-ತಾಯಿಯ ಋಣ ತೀರಿಸಲು ಸಾಧ್ಯವಿಲ್ಲವಾದರೂ ನಮ್ಮ ಸಾಧನೆ ಮೂಲಕ ಸಮಾಜದಲ್ಲಿ ಅವರಿಗೆ ಗೌರವವನ್ನು ತಂದುಕೊಡುವ ರೀತಿಯಲ್ಲಿ ನಾವು ಬೆಳೆದು ಅವರಿಗೆ ಕೃತಜ್ಞರಾಗಿರಬಹುದು ಎಂದು ಆದಾಯಕರ ಇಲಾಖೆ ಅಧಿಕಾರಿ ಆರ್.ಬಿ. ಕಬ್ಬಲಗೇರಿ ಹೇಳಿದರು.

ಗುರುವಾರ ನಗರದ ಹೊರ ವಲಯ ಇಟ್ಟಂಗಿಹಾಳದಲ್ಲಿರುವ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಗೊಡುಗೆ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಧೈರ್ಯವಾಗಿ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಕಲಿತ ಶಾಲೆಯ ಹೆಸರನ್ನು ಉಳಿಸಬೇಕು ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯ ಅನಾವರಣ ಶಿಕ್ಷಕರು, ಪಾಲಕರು ಒಟ್ಟಾಗಿ ಶ್ರಮಿಸಿದಾಗ ಮಾತ್ರ ಸಾಧ್ಯ. ಪಠ್ಯದೊಂದಿಗೆ ಪಠ್ಯೇತರಕ್ಕೂ ಆದ್ಯತೆ ನೀಡುವ ಮೂಲಕ ಸರ್ವಾಂಗೀಣ ಬೆಳವಣಿಗೆ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಸಂಸ್ಥಾಪಕ ಪ್ರ. ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಸಾಧನೆ ಸುಲಭವಾಗಿ ಒಲಿಯುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ, ತಾಳ್ಮೆ, ಸಮಯ ಪ್ರಜ್ಞೆ ಅಗತ್ಯ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಉತ್ತಮ ಅಂಕಗಳನ್ನು ಪಡೆದು, ಸಮಾಜ ಗುರುತಿಸುವಂತೆ ಬೆಳೆಯಬೇಕು ಎಂದು ಶುಭ ಹಾರೈಸಿದರು.

2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಠ ಸಾಧನೆ ಮಾಡಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಸಾಧಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ವಿಶಿಷ್ಟವಾಗಿ ಗೌರವಿಸಲಾಯಿತು.

ದಯಾನಂದ ಕೆಲೂರ, ಅನಿಲಕುಮಾರ ಅಂಕದ, ಶಿವಾನಂದ ಗೋಕಾವಿ, ಎಸ್.ಬಿ. ಹೆಗಲಾಡಿ ವೇದಿಕೆಯಲ್ಲಿದ್ದರು. ಚಿನ್ಮಯಿ ಪಾಟೀಲ ಹಾಗೂ ಶ್ರೇಯಾ ಚಿಕ್ಕೋಡಿ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ಹಡಪದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net