

ಹುಬ್ಬಳ್ಳಿ : ಪ್ರತಿಯೊಬ್ಬರ ಬದುಕಿಗೆ ಸಮಾಜದ ಕೊಡುಗೆ ಅಪಾರವಾಗಿದೆ. ನಾವು ಸಮಾಜದ ಒಳಿತಿಗೆ ಮತ್ತು ಅದರ ಗಟ್ಟಿತನಕ್ಕೆ ಸ್ವಲ್ಪಾದರೂ ಋಣ ತೀರಿಸುವಂತೆ ಬದುಕಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುವುದು. ಯಾವುದೇ ಸಂಸ್ಥೆ ಇರಲಿ ಗಳಿಸಿದ್ದರಲ್ಲಿ ಸ್ವಲ್ಪ ಭಾಗ ಸಮಾಜಕ್ಕೆ ಕೊಡಬೇಕು ಎನ್ನುವ ಯೋಚನೆ ಇರಬೇಕು. ಅಂದಾಗ ಆ ಸಂಸ್ಥೆ ನಮ್ಮದು ಎಂಬ ಭಾವನೆ ಬರುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಹೇಳಿದರು.
ವಿಭವ ಸಮೂಹ ಸಂಸ್ಥೆಗಳು ಹಾಗೂ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ನೂಲ್ವಿ ಕ್ರಾಸ್ನಲ್ಲಿರುವ ವಿಭವ ಸಂಸ್ಥೆಯಲ್ಲಿ ಸ್ಥಾಪಿಸಲಾದ ದೃಷ್ಟಿಕೇಂದ್ರವನ್ನು ಶುಕ್ರವಾರ ಉದ್ಘಾಟನೆ ಮಾಡಿ, ಅವರು ಮಾತನಾಡಿದರು.
ಹುಬ್ಬಳ್ಳಿ ತಾಲೂಕಿನ ನೂಲ್ವಿ ನೂಲ್ವಿ ಹಾಗೂ ಕುಂದಗೋಳ ತಾಲೂಕಿನ ವ್ಯಾಪ್ತಿಯಲ್ಲಿನ 40 ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ದೃಷ್ಟಿ ಕೇಂದ್ರ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಅಂಧತ್ವ ಮುಕ್ತ ಭಾರತದ ನಿರ್ಮಾಣ ನಮ್ಮೆಲ್ಲರ ಕನಸಾಗಿದ್ದು, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ನೇತ್ರದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಭವ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂದಕುಮಾರ, ವಿಭವ ಸಂಸ್ಥ ನಡೆದು ಬಂದ ದಾರಿ ವಿವರಿಸಿದರು.
ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿದರು. ಶಾಸಕ ಎಂ. ಆರ್. ಪಾಟೀಲ, ಡಾ.ಎಂ.ಎಂ.ಜೋಶಿ ಆಸ್ಪತ್ರೆಯ ಸಂಸ್ಥಾಪಕರಾದ ಪದ್ಮಶ್ರೀ ಡಾ. ಎಂ.ಎಂ. ಜೋಶಿ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ನಿರ್ದೇಶಕರಾದ ಡಾ. ಶ್ರೀನಿವಾಸ ಜೋಶಿ, ಡಾ.ಕೃಷ್ಣಪ್ರಸಾದ, ಡಾ .ಎಸ್.ವಿ .ಪ್ರಸಾದ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ನಿಂಗನಗೌಡರ, ಆದಿತ್ಯ ನಂದಕುಮಾರ, ವಿನೋದ ಜವಳಿ, ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.
ವಿಭವ ಸಂಸ್ಥೆಯ ಉಪಾಧ್ಯಕ್ಷ ಧ್ರುವಚಂದ್ರ ನಂದಕುಮಾರ ಸ್ವಾಗತಿಸಿ, ನಿರೂಪಿಸಿದರು. ವಿಭವ ರೂವಾರಿಗಳಾದ ಉದಯ ಬಾಡ್ಕರ್, ವಿಠ್ಠಲ ಗಂಭೀರ, ದತ್ತಾತ್ರೇಯ ರತನ್ ಅವರು ಅತಿಥಿಗಳನ್ನು ಸನ್ಮಾನಿಸಿದರು.