ಕ್ರೀಡಾಂಗಣಗಳಲ್ಲಿ ದುಡ್ಡು ಕೊಟ್ಟು ಆಟ ಆಡಿ

19Tmk_Pay_N_Play
Published on

ತುಮಕೂರು: ಕ್ರೀಡಾಂಗಣಗಳಲ್ಲಿ ಇನ್ಮೇಲೆ ‘ಪೇ ಆ್ಯಂಡ್ ಪ್ಲೇ’ (ದುಡ್ಡು ಕೊಟ್ಟು ಆಟ ಆಡಿ) ರಾಜ್ಯ ಸರ್ಕಾರದ ಆದೇಶಕ್ಕೆ ಜಿಲ್ಲೆಯ ಕ್ರೀಡಾಪಟುಗಳ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


ಸ್ಮಾರ್ಟ್‌ಸಿಟಿ ಲಿಮಿಟೆಡ್ ಯೋಜನೆ ಅಡಿ ಅಭಿವೃದ್ಧಿ ಪಡಿಸಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಬಳಕೆಗೆ ಇನ್ನೂ ಕ್ರೀಡಾಪಟುಗಳು ಶುಲ್ಕ ತೆರಬೇಕಾಗಿದ್ದು, ಇದನ್ನು ವಿರೋಧಿಸಿ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ.


ಜಿಲ್ಲಾ ಹಾಗೂ ತಾಲೂಕು ಕ್ರೀಡಾಂಗಣಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಲು ಕ್ರೀಡಾಪಟುಗಳು ಶುಲ್ಕ ತೆರಬೇಕಾಗಿದೆ. ರಾಜ್ಯ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಏಕರೂಪ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಕ್ರೀಡಾಂಗಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಆರ್ಥಿಕ ಸ್ವಾವಲಂಬನೆಗೊಳಿಸಿ ಮೇಲ್ದರ್ಜೆಗೇರಿಸಲು ಈ ಪೇ ಆ್ಯಂಡ್ ಪ್ಲೇ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲೂ ಆಡಲು ಕ್ರೀಡಾಪಟುಗಳು ಶುಲ್ಕ ಪಾವತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಕ್ರೀಡಾಂಗಣದಲ್ಲಿ ಹಿರಿಯ ಕ್ರೀಡಾಪಟುಗಳು, ಕ್ರೀಡಾತರಬೇತುದಾರರು ಸಭೆ ಸೇರಿ ಚರ್ಚೆ ನಡೆಸಿ, ರಾಜ್ಯ ಸರ್ಕಾರದ ಈ ನಡೆಯನ್ನು ವಿರೋಧಿಸಿ ಕ್ರೀಡಾಂಗಣದ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿದರು.


ಕ್ರೀಡಾ ಚಟುವಟಿಕೆಗಳೇ ಕ್ಷೀಣಿಸಿವೆ. ಕ್ರೀಡೆಗೆ ತಗಲುವ ವೆಚ್ಚ ಭರಿಸುವುದು ಪಾಲಕರಿಗೆ ದೊಡ್ಡ ಸವಾಲಾಗಿದ್ದು, ಇಂತಹ ಸಂದರ್ಭದಲ್ಲಿ ನಗರದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆಂದು ಇರುವ ಜಾಗಕ್ಕೂ ಶುಲ್ಕ ನಿಗದಿ ಮಾಡಿರುವುದು ಖಂಡನೀಯ. ಶುಲ್ಕ ನಿಗದಿ ಸಂದರ್ಭದಲ್ಲಿ ಸ್ಥಳೀಯ ಕ್ರೀಡಾಪಟುಗಳನ್ನಾಗಲಿ, ಕ್ರೀಡಾ ಸಂಸ್ಥೆಗಳನ್ನಾಗಲಿ ಗಮನಕ್ಕೆ ತೆಗೆದುಕೊಂಡಿಲ್ಲ. ಏಕಾಏಕಿ ನಿರ್ಧಾರ ಖಂಡನೀಯ. ಕೂಡಲೇ ಸರಕಾರ ಸ್ಟೇಡಿಯಂ ಬಳಕೆಗೆ ವಿಧಿಸಿರುವ ಶುಲ್ಕವನ್ನು ಹಿಂಪಡೆಯಬೇಕು ಹಾಗೂ ಶೂಟಿಂಗ್ ಸೇರಿ ಎಲ್ಲ ಕ್ರೀಡೆಗಳ ಅಭ್ಯಾಸಕ್ಕೂ ಅವಕಾಶ ಕಲ್ಪಿಸುವಂತೆ ಕ್ರೀಡಾಪ್ರೋತ್ಸಾಹಕ ಧನಿಯಾಕುಮಾರ್ ಒತ್ತಾಯಿಸಿದರು.


ವಿವೇಕಾನಂದ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಟಿ.ಎಂ.ಅನಿಲ್, ದೈಹಿಕ ಶಿಕ್ಷಣ ಶಿಕ್ಷಕ ಹೊಸಳ್ಳಪ್ಪ, ಕ್ರೀಡಾಪಟು ಗಳಾದ ಹರೀಶ್ ಬಾಬು, ವಿನಯ್, ಬಾಲರಾಜು, ನರೇಶ್ ಕುಮಾರ್, ಮರಿತಿಮ್ಮಯ್ಯ, ಪ್ರಭಾಕರ್ ಆರ್ಚಾಯ, ಮಂಜುನಾಥ್, ರಮೇಶ್ ಇದ್ದರು.

ದೇಶಿ ಕ್ರೀಡೆಯಿಂದ ಮಕ್ಕಳು ವಿಮುಖರಾಗುತ್ತಿದ್ದು, ಇಂತಹ ಸಮಯದಲ್ಲಿ ಕ್ರೀಡಾಂಗಣದಲ್ಲಿ ಆಡಲು ಪೇ ಆ್ಯಂಡ್ ಪ್ಲೇ ಆದೇಶ ನಿಜಕ್ಕೂ ಮಾರಕವೆನಿಸಿದೆ. ಕ್ರೀಡೆಗೆ ಪ್ರೋತ್ಸಾಹ ಕೊಡುವ ಬದಲು ಹಳ್ಳಿಗಾಡಿನ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಕ್ರೀಡೆಯಿಂದಲೇ ದೂರ ಉಳಿಯುವಂತೆ ಮಾಡುವುದಾಗಿದೆ.
- ಪ್ರದೀಪ್ ವಾಲಿಬಾಲ್ ತರಬೇತುದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net