

ಲಕ್ಷೆ್ಮೕಶ್ವರ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಕೃಷ್ಣಪ್ಪ ಧರ್ಮರ ಹೇಳಿದರು.
ಕರವಸೂಲಾತಿ ಮಾಸಾಚರಣೆ ಪ್ರಯುಕ್ತ ತಾಲೂಕಿನ ಮಾಡಳ್ಳಿ ಮತ್ತು ಗೊಜನೂರ ಗ್ರಾಪಂಗಳಲ್ಲಿ ಸೋಮವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ 14 ಗ್ರಾಪಂಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರವಸೂಲಿಗಾರರ ಸಭೆ ನಡೆಸಿ, ಎಲ್ಲ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಶೇ. 100ರಷ್ಟು ಕರವಸೂಲಿ ಪ್ರಗತಿ ಸಾಧಿಸಲು ಈ ಮಾಸಾಚರಣೆ ಹಮ್ಮಿಕೊಳ್ಳಬೇಕು ಎಂದರು.
ಗ್ರಾಪಂಗಳು ಆರ್ಥಿಕವಾಗಿ ಸದೃಢವಾಗಲು ಕರ ವಸೂಲಾತಿ ಅವಶ್ಯವಾಗಿದೆ. ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಕರ ವಸೂಲಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ. ಇದರಿಂದ ಕರ ವಸೂಲಾತಿಯಲ್ಲಿ ಪ್ರಗತಿ ಸಾಧಿಸಬಹುದಾಗಿದೆ ಎಂದರು. ಪಿಡಿಒಗಳಾದ ಡಿ.ಡಿ. ಹಂದಿಗನೂರ, ಮಂಜುನಾಥ ಮಲ್ಲೂರ, ಗ್ರಾಪಂ ಕಾರ್ಯದರ್ಶಿಗಳಾದ ನವ್ಯಾ ಗಾವಡಿ, ಸೋಮು ಲಮಾಣಿ, ಗ್ರಾಪಂ ಕರವಸೂಲಿಗಾರ ಎಸ್.ವಿ. ಪಾಟೀಲ, ಸಿ.ಎನ್. ನಾಡಗೇರ, ಪ್ರಕಾಶ ಅಂಗಡಿ, ನಿಂಗರಾಜ ಬಾಗವಾಡ, ಇತರರಿದ್ದರು.