ಸಚಿವ ಚಲುವರಾಯಸ್ವಾಮಿ ವಿರುದ್ಧ ಪೇಸಿಎಸ್ ಅಭಿಯಾನ: ಮಂಡ್ಯ ನಗರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

2
Published on

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳ ಪತ್ರ ಬರೆದಿದ್ದಾರೆನ್ನುವ ಆರೋಪದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಪೇ ಸಿಎಸ್ ಫೋಸ್ಟರ್ ಅಭಿಯಾನ ನಡೆಸಿದರು. ಈ ವೇಳೆ ಪೊಲೀಸರು ಫೋಸ್ಟರ್ ಅಂಟಿಸುತ್ತಿದ್ದವರನ್ನು ಬಂಧಿಸಿದ್ದಾರೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಪೇಸಿಎಂ ಅಭಿಯಾನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೆಡ್ಡು ಹೊಡೆದ ಬಿಜೆಪಿ ಫೋಸ್ಟರ್ ಅಂಟಿಸಿ ‘ಸ್ಕಾೃನ್ ಮಾಡಿ ನೋಡಿ, ಚೆಲುವ ಚನ್ನಿಗರಾಯನ ಭ್ರಷ್ಟಾಚಾರ ಬರಬಹುದು’ ಎನ್ನುವ ಶೀರ್ಷಿಕೆಯಡಿ ವ್ಯಂಗ್ಯ ಪ್ರತಿಭಟನೆ ನಡೆಸಿದರು. ಜಯಚಾಮರಾಜೇಂದ್ರ ವೃತ್ತದಲ್ಲಿ ಸಚಿವ ಚಲುವರಾಯಸ್ವಾಮಿ ಭಾವಚಿತ್ರ ಇದ್ದ ಫ್ಲೆಕ್ಸ್‌ಗೆ ‘ಪೇಸಿಎಸ್ ಅಭಿಯಾನದ ಫೋಸ್ಟರ್ ಅಂಟಿಸಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿಯ ಮಧ್ಯಭಾಗದ ಕಲ್ಲುಗಳಿಗೂ ಫೋಸ್ಟರ್ ಅಂಟಿಸಿದ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಕಾರ್ಯಕರ್ತರಾದ ಶಿವಕುಮಾರ್ ಆರಾಧ್ಯ, ಪ್ರಸನ್ನ, ಶಿವಕುಮಾರ್, ವಿನೋಬಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಫೋಸ್ಟರ್‌ಗಳನ್ನು ಕಿತ್ತು ಹಾಕಿದರು.

ಕೃಷಿ ಇಲಾಖೆಯ ಅಧಿಕಾರಿಗಳು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಲಕ್ಷಾಂತರ ರೂ ಕೊಡುವಂತೆ ಒತ್ತಡ ಹಾಕಿಸುತ್ತಿದ್ದು, ಇದರ ಬಗ್ಗೆ ಕ್ರಮ ವಹಿಸದಿದ್ದರೆ ಕುಟುಂಬದವರೊಂದಿಗೆ ವಿಷ ಕುಡಿಯುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ತನಿಖೆಗೆ ಮುನ್ನವೇ ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದೆ. ಪತ್ರವನ್ನು ನಕಲಿ ಎಂದು ಘೋಷಣೆ ಮಾಡಿರುವುದು ಖಂಡನೀಯ. ಅತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಣ ಕೇಳಿದ್ದಾರೆಂದು ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಆದ್ದರಿಂದ ನೈತಿಕ ಹೊಣೆ ಹೊತ್ತು ಇಬ್ಬರು ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net