ಪೌರ ಕಾರ್ಮಿಕರಿಗೆ 5ನೇ ತಾರೀಖಿನೊಳಗೆ ಸಂಬಳ ಕೊಡಿ

h21-palike joshi
Published on

ಹುಬ್ಬಳ್ಳಿ: ಪೌರ ಕಾರ್ಮಿಕರು ಹಾಗೂ ಡಿ ದರ್ಜೆ ನೌಕರರಿಗೆ ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಸಂಬಳ ಕೊಡಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವತಿಯಿಂದ ನಗರದ ತೋಳನಕೆರೆ ಬಳಿ ಶನಿವಾರ ಏರ್ಪಡಿಸಿದ್ದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದಿಲ್ಲ. ಬಡವರ ಪರ ಸರ್ಕಾರ ಎನ್ನುವ ಕಾಂಗ್ರೆಸ್‌ನವರು ಮೊದಲು ಇಂಥವರಿಗೆ ಸಂಬಳ ಕೊಡುವುದನ್ನು ಕಲಿಯಲಿ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ರೆಸ್ಯೂಲೇಷನ್ ಪಾಸ್ ಮಾಡುವಂತೆ ಮೇಯರ್ ರಾಮಣ್ಣ ಬಡಿಗೇರ ಅವರಿಗೆ ಸೂಚಿಸಿದರು.
ಕಸದ ಗುಡ್ಡ ವಿಲೇವಾರಿಗೆ 31 ಕೋಟಿ ರೂ. ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 80 ಕೋಟಿ ರೂ. ಕೊಡಲಾಗಿದೆ. ಎನ್‌ಟಿಪಿಎಸ್ ತ್ಯಾಜ್ಯದಿಂದ ಚಾರಕೋಲ್ ಉತ್ಪಾದಿಸಲು 110 ಕೋಟಿ ರೂ. ಕೊಡುತ್ತಿದೆ. ಇದಕ್ಕೆ ನಿಗದಿತ ಜಾಗ ನೋಡಿ ಪರಿಶೀಲಿಸಬೇಕು ಎಂದು ಸ್ಥಳದಲ್ಲಿದ್ದ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚಿಸಿದರು. 10-15 ದಿನಗಳಲ್ಲಿ ಚಾಲನೆ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಮಹಾತ್ಮಗಾಂಧೀಜಿ ಅವರ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಜನಾಂದೋಲನದ ಮೂಲಕ ದೇಶಾದ್ಯಂತ ಸ್ವಚ್ಛತೆಗೆ ಕರೆ ನೀಡಿದರು ಎಂದು ಬಣ್ಣಿಸಿದರು.
ಮೇಯರ್ ರಾಮಣ್ಣ ಬಡಿಗೇರ ಮಾತನಾಡಿ, ಸ್ವಚ್ಛ ಭಾರತ ಆಂದೋಲನಕ್ಕೆ 10 ವರ್ಷ ತುಂಬಿದೆ. ಪಾಲಿಕೆಯಿಂದ ಅನೇಕ ಕಾರ್ಯಕ್ರಮ ಮಾಡಿದ್ದೇವೆ. ಅವಳಿ ನಗರ ಸ್ವಚ್ಛವಾಗಿರಲು ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಮೊದಲು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಉಮಾ ಮುಕುಂದ, ವೀಣಾ ಬರದ್ವಾಡ, ಇಂಜಿನಿಯರ್‌ಗಳಾದ ವಿಜಯಕುಮಾರ, ಮಲ್ಲಿಕಾರ್ಜುನ ಬಿ.ಎಂ., ಶ್ರೀಧರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net