ಹಿಂದು ಧರ್ಮಪಾಲಿಸಲು ಗಮನ ಕೊಡಿ- ಶ್ರೀಗಳು ತಿರುಮಲ ವೆಂಕಟೇಶ ದೇವರ ಶೇಷವಸ್ತ್ರ ಸಮರ್ಪಣೆ

raichur
raichur
Published on

ರಾಯಚೂರು ಸನಾತನ ಹಿಂದು ಧರ್ಮದ ರಕ್ಷಣೆ ಮಾಡುವಲ್ಲಿ ತಿರುಮಲ ಕ್ಷೇತ್ರ ಮಹತ್ವದ ಪಾತ್ರವಹಿಸುತ್ತಿದೆ. ದೇಶದಲ್ಲಿರುವ ಎಲ್ಲ ಹಿಂದುಗಳು ಧರ್ಮ ಪಾಲನೆಗೆ ಹೆಚ್ಚಿನ ಗಮನಹರಿಸಬೇಕೆಂದು ಮಂತ್ರಾಲಯದ ಮಠಾಧೀಶ ಶ್ರೀಸುಬುಧೇಂದ್ರ ತೀರ್ಥರು ಕರೆ ನೀಡಿದರು.

ರಾಯರ 354 ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಸಪ್ತರಾತ್ರೋತ್ಸವದ ಎರಡನೇ ದಿನ ಶನಿವಾರ ಬೆಳಗ್ಗೆ ತಿರುಪತಿ ತಿರುಮಲ ದೇವಸ್ಥಾನದಿಂದ ತರಲಾದ ವೆಂಕಟೇಶ್ವರ ದೇವರ ಶೇಷವಸ್ತ್ರ ಪ್ರಸಾದ ರೂಪವನ್ನು ಶ್ರೀಗಳು ಶ್ರೀಮಠದ ಮುಖ್ಯದ್ವಾರದಿಂದ ಅದ್ದೂರಿ ಮೆರವಣಿಗೆಯಲ್ಲಿ ಶೇಷವಸ್ತವನ್ನು ತಲೆ ಮೇಲೆ ಹೊತ್ತುಕೊಂಡು ಬಂದು ರಾಯರಿಗೆ ಸಂಪರ್ಪಿಸಿ ನಂತರ ಅನುಗ್ರಹ ಸಂದೇಶ ನೀಡಿದರು.

ಹಿಂದುಗಳೆಲ್ಲರೂ ಧರ್ಮದ ಆಚಾರ ವಿಚಾರಗಳನ್ನು ತಪ್ಪದೇ ಪಾಲಿಸಬೇಕು. ಜೀವನದಲ್ಲಿ ದೇಶದ ಸಂಸ್ಕೃತಿಯನ್ನು ಗೌರವಿಸುವ ಗುಣ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಿರುಪತಿಯ ವೆಂಕಟೇಶ ದೇವಸ್ಥಾನವು ಧರ್ಮ ಪರಿಪಾಲನೆಯ ಜಾಗೃತಿ ಮೂಡಿಸುತ್ತಿದೆ. ಅದೇ ಮಾದರಿಯಲ್ಲಿ ಮಂತ್ರಾಲಯ ಕ್ಷೇತ್ರವು ಸಹ ಧರ್ಮಪಾಲನೆ ಕಾರ್ಯ ಮಾಡುತ್ತಿದೆ ಎಂದರು.

ವೆಂಕಟೇಶ್ವರ ದೇವರ ಅನುಗ್ರಹಿತ ರಾಯರು ವಿಶ್ವಮಾನ್ಯರಾಗಿ ಗುರುಗಳಾಗಿ ಭಕ್ತರ ಕಷ್ಟ ಪರಿಹರಿಸುತ್ತಿದ್ದಾರೆ. ಯಾವುದೇ ಜಾತಿಮತ ಭೇದವಿಲ್ಲದಂತೆ ಸರ್ವರಿಗೂ ಅನುಗ್ರಹಿಸುತ್ತಿದ್ದಾರೆಂದು ನುಡಿದರು.

ಆರಾಧನೆ ಸೇರಿ ಪ್ರಮುಖ ಸಂದರ್ಭದಲ್ಲಿ ವೆಂಕಟೇಶ ದೇವರಿಗೆ ತೊಡಿಸಿದ ಶೇಷವಸ್ತ್ರ ಮಂತ್ರಾಲಯ ರಾಯರಿಗೆ ಸಮರ್ಪಣೆಯಾಗುತ್ತಿದೆ. ಇದು ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ತಿರುಮಲ ಮತ್ತು ಮಂತ್ರಾಲಯದ ನಡುವಿನ ಅವಿನಾಭಾವ ಬಾಂಧವ್ಯವನ್ನು ತೋರಿಸುತ್ತದೆ ಎಂದರು. ಇದಕ್ಕೂ ಮೊದಲು ಟಿಟಿಡಿ ಅಧಿಕಾರಿ ರಾಮಕೃಷ್ಣ ಮತ್ತು ಇತರೆ ಸಿಬ್ಬಂದಿ ವೆಂಕಟೇಶ ದೇವರ ಶೇಷವಸ್ತ್ರವನ್ನು ತಂದರು. ಶ್ರೀಗಳು ಮಠದ ಮುಖದ್ವಾರದಲ್ಲಿ ಬರಮಾಡಿಕೊಂಡ ನಂತರ ರಾಯರಿಗೆ ಶೇಷ ವಸ್ತ್ರ ಸಮರ್ಪಿಸಿದರು.

ನಂತರ ಟಿಟಿಡಿ ವತಿಯಿಂದ ಸ್ವಾಮೀಜಿಯನ್ನು ಸನ್ಮಾನಿಸಲಾಯಿತು.

ಶ್ರೀಮಠದ ಅಧಿಕಾರಿಗಳು ಹಾಗೂ ವಿದ್ವಾಂಸರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net