

ಹೊಳೆನರಸೀಪುರ: ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಶಾಲೆಗಳಿಗೆ ವೈದ್ಯರು ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ರಮೇಶ್ ಹೇಳಿದರು.
ಪಟ್ಟಣದ 17ನೇ ವಾರ್ಡ್‌ನಲ್ಲಿರುವ ಗ್ರೀನ್‌ವುಡ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಆಸ್ಪತ್ರೆ ವ್ಯಾಪ್ತಿಯಲ್ಲಿರುವ ಎಲ್ಲ ಶಾಲೆಯ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಹೃದಯ ಸಂಬಂಧಿ ಕಾಯಿಲೆ ಮತ್ತಿತರ ಕಾಯಿಲೆಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಚಿಕಿತ್ಸೆ ನೀಡಲು ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು.
ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿದ್ದು ಆರೋಗ್ಯದ ಕಡೆ ಗಮನ ಹರಿಸಬೇಕು. ಪಾಲಕರು ಜವಾಬ್ದಾರಿತವಾಗಿ ಮಕ್ಕಳ ಪೋಷಣೆ ಮಾಡುವಾಗ ಅವರ ದೇಹದ ಆರೋಗ್ಯದ ಸ್ಥಿತಿಗತಿಯನ್ನು ಗಮನಿಸಬೇಕು. ಮಕ್ಕಳಿಗೆ ಟಿವಿ, ಮೊಬೈಲ್ ಬಳಕೆ ಮಾಡಲು ಬಿಡಬಾರದು. ಅತಿಯಾಗದೆ ಮಿತಿಯಾಗಿರಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣುಗಳು, ಮಿದುಳು ನಿಷ್ಕ್ರಿಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮೊಬೈಲ್ ಬಳಕೆಯಿಂದ ದೂರ ಸರಿಯಬೇಕು ಎಂದು ಎಚ್ಚರಿಸಿದರು.
ಡಾ.ಸೆಲ್ವಕುಮಾರ್ ಮಾತನಾಡಿ, ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಲು ಪಾಲಕರು ಗುಣಮಟ್ಟದ ಆಹಾರವನ್ನು ಕೊಡಬೇಕು. ಇತ್ತೀಚೆಗೆ ಬೇಕರಿಯಲ್ಲಿ ತಯಾರಿಸುವ ಸ್ನಾಕ್ಸ್, ಜಂಕ್‌ಫುಡ್, ಮಸಾಲೆ ಪದಾರ್ಥ ತಿಂಡಿಗಳು, ನೂಡಲ್ಸ್‌ನಂತಹ ಸುರಕ್ಷತೆ ಇಲ್ಲದ ವಿಷಕಾರಿ ಆಹಾರವನ್ನು ಅಭ್ಯಾಸ ಮಾಡಿಸಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಪಾನಿಪುರಿ ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಸಿ ಆಹಾರ ತಯಾರಿಸುತ್ತಿರುವುದರಿಂದ ಮಕ್ಕಳ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿದೆ. ದೇಹದ ಮೇಲೆ ತುರಿಕೆಗಳು, ಹೊಟ್ಟೆ ನೋವು, ಕರುಳು ಬೇನೆ, ಬಿಪಿ, ಮಧುಮೇಹ, ವಾಂತಿ ಮತ್ತಿತರ ಕಾಯಿಲೆಗಳಿಗೆ ತುತ್ತಾಗುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ. ಚೈನೀಸ್ ಫಾಸ್ಟ್ ಫುಡ್‌ಗೆ ಮೊರೆ ಹೋಗದೆ ಯಥೇಚ್ಛವಾಗಿ ಮುದ್ದೆ, ಸೊಪ್ಪು ತರಕಾರಿಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಅತಿಯಾದ ಮಾಂಸಾಹಾರ ಕೊಡುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ರಕ್ತನಾಳ ಮುಚ್ಚಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಹೃದಯಾಘಾತವಾಗುವ ಸಂಭವವಿರುತ್ತದೆ. ಯಾವುದೇ ವ್ಯಕ್ತಿಗೆ ಬಿಎಂಐ ಗರಿಷ್ಠ 25ರ ಒಳಗೆ ಇರಬೇಕು. ಬಿಪಿ ಮಧುಮೇಹ ಒಟ್ಟಿಗೆ ಇದ್ದರೆ ಹೃದಯಾಘಾತ ಹೆಚ್ಚಾಗುತ್ತದೆ. ದೇಹದ ತೂಕ ಅತಿ ಹೆಚ್ಚು ಮಾಡಿಕೊಳ್ಳದೆ ಕಡಿಮೆ ಪ್ರಮಾಣದಲ್ಲಿ ಕಾಪಾಡಿಕೊಳ್ಳಬೇಕು. ನಿತ್ಯ ಎಂಟರಿಂದ 10 ಗಂಟೆ ನಿದ್ರೆ ಮಾಡಬೇಕು ನಿದ್ರೆ ಕೊರತೆಯಾದರೆ ಖಿನ್ನತೆಗೆ ಒಳಗಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮನೆಯಲ್ಲಿ ನೈಸರ್ಗಿಕವಾಗಿ ಆಹಾರ ತಯಾರಿಸಿಕೊಂಡು ಉಪಯೋಗಿಸುವುದು ಒಳ್ಳೆಯದು. ಪಾಲಕರು ಕುಟುಂಬ ಸದಸ್ಯರಲ್ಲಿ ಯಾರಿಗಾದರೊಬ್ಬರಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ ಕುಟುಂಬದ ಯಾರಿಗಾದರೂ ಹೃದಯಾಘಾತ ಆಗಬಹುದು. ಚಿಕ್ಕವಯಸ್ಸಿನಲ್ಲಿ ಮೃತಪಟ್ಟರೆ ಇದರಿಂದ ಕುಟುಂಬಕ್ಕೆ ಅಪಾರವಾದ ನಷ್ಟ ಉಂಟಾಗುತ್ತದೆ. 30 ವರ್ಷ ಮೇಲ್ಪಟ್ಟವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಇಸಿಜಿ, ಬಿಪಿ, ಮಧುಮೇಹ ಪರೀಕ್ಷೆ ಒಳಪಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ತಪಾಸಣೆಯಲ್ಲಿ ನರ್ಸ್‌ಗಳಾದ ಶಶಿಕಲಾ, ಪ್ರೇಮಾ, ಸತೀಶ್, ಸೌಮ್ಯಾ, ಮುಖ್ಯಶಿಕ್ಷಕಿ ಮಂಜುಳಾ ರಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಕೆಂಪೇಗೌಡ ಇತರರು ಇದ್ದರು.