

ರಾಯಚೂರು: ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಮೂರು ತಿಂಗಳ ಪಿಂಚಣಿಯನ್ನು ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ವೇಣುಗೋಪಾಲಗೆ ಮನವಿ ಸಲ್ಲಿಸಿ, ಸರ್ವೆ ಪಟ್ಟಿಯಿಂದ ಕೈಬಿಟ್ಟುಹೋದ ದೇವದಾಸಿ ಮಹಿಳೆಯರನ್ನು ಮರು ಸೇರ್ಪಡೆಗೆ ಮರು ಸಮೀಕ್ಷೆಗೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ರಾಯಚೂರು ತಾಲೂಕಿನ 206 ವಿಮುಕ್ತ ದೇವದಾಸಿ ಮಹಿಳೆಯರ ಪುನರ್ ವಸತಿಗಾಗಿ ಸರ್ವೇ ನಂ.1403ರಲ್ಲಿನ 5 ಎಕರೆ ಜಮೀನು ಮಂಜೂರು ಮಾಡಿ ನಿವೇಶನ ಹಕ್ಕುಪತ್ರ ನೀಡಿ ನಾಲ್ಕು ವರ್ಷ ಕಳೆದರೂ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿಲ್ಲ. ಕೂಡಲೇ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು.
ದೇವದಾಸಿ ಮಹಿಳೆಯರ ಮಕ್ಕಳ ಮದುವೆಗೆ ನೀಡಲಾಗುವ ಧನಸಹಾಯ ಬಿಡುಗಡೆ ವಿಳಂಬವಾಗುತ್ತಿದ್ದು, ಧನಸಹಾಯಕ್ಕೆ ಅರ್ಜಿ ಹಾಕಿದ ಎಲ್ಲರಿಗೂ ಕೂಡಲೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಜಿ.ವೀರೇಶ, ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ತಾಲೂಕು ಅಧ್ಯಕ್ಷೆ ಜಮಲಮ್ಮ, ಪದಾಕಾರಿಗಳಾದ ಮಹಾದೇವಿ, ಸರೋಜಮ್ಮ, ಡಿ.ಎಸ್.ಶರಣಬಸವ ಪಾಲ್ಗೊಂಡಿದ್ದರು.