

ರಾಯಚೂರು: ದೇಶದ ಅಭಿವೃದ್ಧಿ ದೃಷ್ಟಿಯಿಂದ ವ್ಯಾಪರಸ್ಥರು ಮುಂಗಡವಾಗಿ ತೆರಿಗೆ ಪಾವತಿಸುವುದು ಬಹಳ ಮುಖ್ಯವಾಗಿದೆ. ಮುಂಗಡ ತೆರಿಗೆ ಪಾವತಿಸದಿದ್ದಲ್ಲಿ ದಂಡ ಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಎಲ್ಲರೂ ಮುಂಗಡವಾಗಿ ತೆರಿಗೆ ಪಾವತಿಸಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್.ಕಮಲಕುಮಾರ ಹೇಳಿದರು.
ಸ್ಥಳೀಯ ಮಾ ಆಶಾಪುರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಆದಾಯ ತೆರಿಗೆ ಇಲಾಖೆ ಮತ್ತು ತೆರಿಗೆ ಸಲಹೆಗಾರರ ಸಂಘದಿಂದ ಗುರುವಾರ ಸಂಜೆ ಏರ್ಪಡಿಸಿದ್ದ ಮುಂಗಡ ತೆರಿಗೆ ಪಾವತಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೆಸ್ಕಾಂ ವಿದ್ಯುತ್ ಬೆಲೆ ಏರಿಕೆ ಮಾಡಿದಾಗ ವಾಣಿಜ್ಯೋದ್ಯಮ ಸಂಘ ನಡೆಸಿದ ಹೋರಾಟದಿಂದ ಬೆಲೆ ಕಡಿಮೆಯಾಗಿದೆ. ಮುಟೇಷನ್ ಶುಲ್ಕದ ಬಗ್ಗೆ, ವ್ಯಾಪಾರಸ್ಥರಿಗೆ ಟ್ರೇಡ್ ಲೈಸೆನ್ಸ್ ಒಂದೇ ಬಾರಿಗೆ ಐದು ವರ್ಷಗಳವರೆಗೆ ನೀಡಲು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಆದಾಯ ತೆರಿಗೆ ಇಲಾಖೆ ಅಕಾರಿ ಟಿ.ಎಸ್.ಗುರುಪ್ರಸಾದ್ ಮಾತನಾಡಿ, ಮುಂಗಡ ತೆರಿಗೆ ಪಾವತಿಸುವುದು ಇಂದು ವ್ಯಾಪರಸ್ಥರಿಗೆ ಅನಿವಾರ್ಯವಗಿದ್ದು, ಸುಧಾರಿತ ತೆರಿಗೆ, ಸ್ವಯಂ ವೌಲ್ಯಮಾಪನ ತೆರಿಗೆ, ಮರುಪಾವತಿ ದಂಡ ನಿಬಂಧನೆಗಳ ಕುರಿತು ವ್ಯಾಪಾರಸ್ಥರು ಅರಿತುಕೊಂಡಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ರಾಮಚಂದ್ರ ಪ್ರಭು ಮಾತನಾಡಿ, ತೆರಿಗೆ ಪಾವತಿ, ನವೀಕರಿಸಿದ ತೆರಿಗೆ, ತೆರಿಗೆ ಕಡಿತ ಸೇರಿದಂತೆ ಆದಾಯ ತೆರಿಗೆ ಪಾವತಿಯಲ್ಲಿನ ಪಾಲಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಕಾರ್ಯದರ್ಶಿ ಜಂಬಣ್ಣ ಯಕ್ಲಾಸಪುರ, ತೆರಿಗೆ ಸಲಹೆಗಾರರ ಸಂಘದ ಕಾರ್ಯದರ್ಶಿ ಚೇತನ್ ದೋಖಾ, ಆದಾಯ ತೆರಿಗೆ ಇಲಾಖೆಯ ಸತ್ಯೇಂದ್ರ ಹಾಗೂ ಜಿಲ್ಲೆಯ ವಾಣಿಜ್ಯೋದ್ಯಮಿಗಳು ಉಪಸ್ಥಿತರಿದ್ದರು.