ಬೆಂಬಲಿಗರೊಂದಿಗೆ ಪವನ್ ಪೆಮ್ಮಯ್ಯ ಕಾಂಗ್ರೆಸ್‌ಗೆ ಸೇರ್ಪಡೆ

congres serpade
Published on

ಮಡಿಕೇರಿ: ಜಿಲ್ಲೆಯ ವಿವಿಧ ಸಮಸ್ಯೆಗಳ ವಿರುದ್ಧ ಜನಪರವಾಗಿ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ, ವಕೀಲ ಅಚ್ಚಾಂಡಿರ ಪವನ್ ಪೆಮ್ಮಯ್ಯರವರು ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.


ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣರವರ ವಿರಾಜಪೇಟೆಯ ಗೃಹ ಕಚೇರಿ ಸಮೀಪ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪವನ್ ಪೆಮ್ಮಯ್ಯರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪೊನ್ನಣ್ಣರವರು ಪವನ್ ಪೆಮ್ಮಯ್ಯ ಹಾಗೂ ಬೆಂಬಲಿಗರಿಗೆ ಕಾಂಗ್ರೆಸ್ ಧ್ವಜ ನೀಡಿ, ಶಲ್ಯ ತೊಡಿಸಿ ಪಕ್ಷಕ್ಕೆ ಬರ ಮಾಡಿಕೊಂಡರು.


ನಂತರ ಮಾತನಾಡಿದ ಶಾಸಕರು, ಜನರೊಂದಿಗೆ ಸರಳವಾಗಿ ಬೆರೆಯಬಲ್ಲ, ಜನರ ಕೈಗೆ ಸುಲಭವಾಗಿ ಸಿಗಬಲ್ಲ, ಜನರ ಸಮಸ್ಯೆಯನ್ನು ಆಲಿಸುವ ಶಕ್ತಿ, ಕಾಳಜಿ ಹೊಂದಿರುವ ವ್ಯಕ್ತಿ ಜನ ಪ್ರತಿನಿಧಿಯಾಗುವುದು ಮತ್ತು ನಾಯಕನಾಗುವುದು ಉತ್ತಮ. ಯುವ ಸಮೂಹ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ರವರು ಗೆಲುವು ಸಾಧಿಸುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.


ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಮಾತನಾಡಿದ ಪವನ್ ಪೆಮ್ಮಯ್ಯ, ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರ ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಯ ವೇಗವನ್ನು ಕಂಡು ಬೆರಗಾಗಿದ್ದೇನೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಇವರಿಬ್ಬರಿಂದ ಶೀಘ್ರ ಪರಿಹಾರ ದೊರೆಯುತ್ತದೆ ಎನ್ನುವ ವಿಶ್ವಾಸದೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಕೊಡಗು ರಕ್ಷಣಾ ವೇದಿಕೆಯಲ್ಲಿದ್ದ ಎಲ್ಲಾ ನನ್ನ ಬೆಂಬಲಿಗರು ಪಕ್ಷವನ್ನು ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಜನಪರ ಸಿದ್ಧಾಂತ ನಮಗೆ ಮೆಚ್ಚುಗೆಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ನಾವುಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇವೆ ಎಂದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಸಿ.ಎಸ್.ಅರುಣ್ ಮಾಚಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net