

ಲಕ್ಷ್ಮೇಶ್ವರ: ಬಸವಾದಿ ಶರಣರ ವಿಚಾರಧಾರೆಗಳು ಸಮಾಜಕ್ಕೆ ಪ್ರಸ್ತುತವಾಗಿವೆ. ಶರಣರು ಅನುಭವ ಮಂಟಪದಲ್ಲಿ ಅರಳಿ ನಿಂತ ತಾರೆಗಳಾಗಿದ್ದಾರೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜಾತಿ, ಧರ್ಮ ಮೀರಿ ಬೆಳೆದ ಸಾಹಿತ್ಯವೇ ಶರಣ ಸಾಹಿತ್ಯವಾಗಿದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶರಣರ ಮೌಲ್ಯಗಳಿಗೆ ಜೀವ ತುಂಬಬೇಕು ಎಂದರು.
ಶಸಾಪ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ಪರಿಷತ್ತಿನ ನೂತನ ಪದಾಧಿಕಾರಿಗಳು ಹಲವಾರು ಕಾರ್ಯಕ್ರಮ ಹಾಕಿಕೊಂಡಿದ್ದು, ಅವುಗಳ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪೊ›. ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿದರು. ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಕೆ.ಎ. ಬಳಿಗಾರ, ಗೌರವಾಧ್ಯಕ್ಷ ದೇವಣ್ಣ ಬಳಿಗಾರ, ನಿರ್ಮಲಾ ಅರಳಿ ಮಾತನಾಡಿದರು. ನಿವೃತ್ತ ಶಿಕ್ಷಕ ಸಿ.ಜಿ. ಹಿರೇಮಠ, ಎಸ್.ಸಿ.ಅಳಗವಾಡಿ, ಬಸಣ್ಣ ಬೆಂಡಿಗೇರಿ, ಮಾಲಾದೇವಿ ದಂದರಗಿ, ರತ್ನಾ ರ್ಕ, ಅಶ್ವಿನಿ ಅಂಕಲಕೋಟಿ, ಎಂ.ಕೆ. ಕಳ್ಳಿಮಠ, ಮುಂತಾದವರಿದ್ದರು. ಪರಿಷತ್ತಿನ ತಾಲೂಕ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಎಸ್. ರಾಮಶೆಟ್ಟರ ನಿರೂಪಿಸಿದರು. ಬಿ.ಎಸ್. ಸಂಗಪ್ಪಶೆಟ್ಟರ ವಂದಿಸಿದರು.