ಬಿಬಿಎಂಪಿಯಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು

foothpath teravu
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ಹಾಗೂ ದಕ್ಷಿಣ ವಲಯಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವನ್ನು ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶುಕ್ರವಾರ ತೆರವುಗೊಳಿಸಿದರು.

ವಿವಿಧ ಸ್ಥಳಗಳಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ನಾಗರಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪಾದಚಾರಿ ಮಾರ್ಗದಲ್ಲಿರುವ ಅಂಗಡಿ/ಮುಂಗಟ್ಟುಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿದ್ದ ಭಾಗಗಳನ್ನು ಮಾತ್ರ ತೆರವು ಮಾಡಲಾಯಿತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ವಲಯದ ಚೋಳೂರುಪಾಳ್ಯ ವ್ಯಾಪ್ತಿಯಲ್ಲಿನ ಮಾಗಡಿ ಮುಖ್ಯರಸ್ತೆ ಹಾಗೂ ಬೊಮ್ಮನಹಳ್ಳಿ ವಲಯದ ಜಂಬೂ ಸವಾರಿ ದಿಣ್ಣೆ ಮುಖ್ಯರಸ್ತೆಯಲ್ಲಿನ ಪಾದಚಾರಿ ಮಾರ್ಗ ಒತ್ತುವರಿಗಳನ್ನು ತೆರವುಗೊಳಿಸಲಾಯಿತು. ಫುಟ್‌ಪಾತ್‌ನಲ್ಲಿ ಹಾಕಲಾಗಿದ್ದ ಜಾಹೀರಾತು ಫಲಕಗಳು, ಬೆಂಚುಗಳು, ಶಾಶ್ವತ ಪೆಟ್ಟಿಗೆಗಳನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಸುಗಮಗೊಳಿಸಲಾಯಿತು. ತೆರವುಗೊಳಿಸಿದ ವಸ್ತುಗಳನ್ನು ಪಾಲಿಕೆ ವಶಕ್ಕೆ ಪಡೆದು ಮತ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡದಂತೆ ಎಚ್ಚರಿಕೆಗಳನ್ನು ನೀಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೂಳು ತೆರವು ಕಾರ್ಯ:

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಸಂತಪುರ ವಾರ್ಡ್‌ನಲ್ಲಿರುವ ಪಿಎನ್‌ಬಿ ಬಡಾವಣೆ ಹಾಗೂ ವಿಠ್ಠಲ ನಗರ ಬಡಾವಣೆಗಳ ಚರಂಡಿಗಳು ಹೂಳಿನಿಂದ ಮುಚ್ಚಿಹೋಗಿತ್ತು. ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದ್ದು, ತುಂಬಿದ್ದ ಹೂಳನ್ನು ತೆರವುಗೊಳಿಸಲಾಗಿದೆ ಎಂದು ವಲಯದ ಅಭಿಯಂತರರು ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆಯ ವೇಳೆ ಎರಡೂ ವಲಯಗಳ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net