

ಸುಬ್ರಹ್ಮಣ್ಯ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಷ್ಟೋ ವರ್ಷಗಳಿಂದ ಯಕ್ಷಗಾನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿಕೊಂಡ ಕಲಾವಿದರನ್ನು ಗೌರವಿಸಿರುವುದು ಶ್ಲಾಘನೀಯ ಎಂದು ಭಾಗವತ ಮತ್ತು ಪಟ್ಲ ಫೌಂಡೇಷನ್‌ನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಶ್ರೀ ದೇವಳದ ನೌಕರರ ವೃಂದ, ಪಟ್ಲ ಅಭಿಮಾನಿಗಳ ಬಳಗ ಸುಬ್ರಹ್ಮಣ್ಯ ವತಿಯಿಂದ ಸೋಮವಾರ ಪಾವಂಜೆ ಮೇಳದ ಯಕ್ಷಗಾನ ಸಂದರ್ಭ ಮಾತನಾಡಿದರು.
ಪಾವಂಜೆ ಮೇಳದ ಐವರು ಕಲಾವಿದರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಗೌರವಿಸಿದರು. ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು, ಕಲಾವಿದರಾದ ಮನೀಷ್ ಪಾಟಾಳಿ, ಮಧುರಾಜ್ ಪೆರ್ಮುದೆ, ಚೌಕಿ ಸಹಾಯಕರಾದ ಲೋಕೇಶ್ ಮಲ್ಲ, ರಾಜು ನಾಳ ಮತ್ತು ಸಮಾಜ ಸೇವಕ ಕಾರ್ತಿಕ್ ಬಿ. ಅವರನ್ನು ಗೌರವಿಸಲಾಯಿತು.
ಗ್ರಾ.ಪಂ. ಸದಸ್ಯ ಹರೀಶ್ ಎಸ್.ಇಂಜಾಡಿ, ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಡಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ. ಮುಖ್ಯಅತಿಥಿಗಳಾಗಿದ್ದರು. ಯಕ್ಷಗಾನ ಸಂಯೋಜಕರಾದ ಪದ್ಮನಾಭ ಮುಚ್ಚಿಂತಾಯ, ಅಶ್ವತ್ಥ್ ಉಪಸ್ಥಿತರಿದ್ದರು. ಬಳಿಕ ಪಾವಂಜೆ ಮೇಳದಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶಿತವಾಯಿತು.