ಪಾರಾಯಣದಿಂದ ಮನುಷ್ಯ ಜೀವನ ಸಾರ್ಥಕ

dj hsd belaguru
Published on

ಹೊಸದುರ್ಗ: ಪವಮಾನಸೂಕ್ತ ಘನ ಪಾರಾಯಣದಂತಹ ಕಾರ್ಯಕ್ರಮಗಳು ಮನುಷ್ಯನ ಜೀವನವನ್ನು ಧರ್ಮದ ಹಾದಿಯಲ್ಲಿ ನಡೆಸಿ ಕೃತಾರ್ಥರನ್ನಾಗಿಸಲಿದೆ ಎಂದು ಮಾರುತಿ ಪೀಠದ ಶ್ರೀ ವಿಜಯ ಮಾರುತಿ ಶರ್ಮ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಲಗೂರು ಗ್ರಾಮದ ವೀರ ಪ್ರತಾಪ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪವಮಾನ ಸೂಕ್ತ,

ಮನ್ಯುಸೂಕ್ತ ಹಾಗೂ ಐತರೇಯೋಪನಿಷತ್ ಪಾರಾಯಣ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ನಡೆದ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ಸಂಪನ್ನಗೊಂಡಿವೆ ಎಂದರು.

ಮಹರ್ಷಿಗಳು ಸತತ ತಪಸ್ಸಿನ ಮೂಲಕ ಪಡೆದ ಅಕ್ಷರ ರೂಪದ ಜ್ಞಾನವೇ ವೇದಗಳು. ಋಗ್ವೇದದ 9ನೇ ಮಂಡಲದಲ್ಲಿರುವ ಪವಮಾನ ಸೋಮ ದೇವತೆಯನ್ನು ಪೂಜಿಸುವ 610 ಮಂತ್ರಗಳ ಸಮೂಹವೇ ಪವಮಾನ ಸೂಕ್ತವಾಗಿದೆ ಎಂದು ತಿಳಿಸಿದರು.

ಇದರ ಪಾರಾಯಣದಿಂದ ಅತರಂಗ ಹಾಗೂ ಬಹಿರಂಗ ಶುದ್ಧಿ ಜತೆಗೆ ಸರ್ವ ದೋಷಗಳು ನಿವಾರಣೆಯಾಗುತ್ತವೆ. ಇದನ್ನು ಪಠಿಸುವುದು ಕಷ್ಟವಾದರೆ ಕೇಳಿಸಿಕೊಳ್ಳುವ ಮೂಲಕ ಲಾಭವನ್ನು ಪಡೆಯಬಹುದು ಎಂದರು.

ಮನ್ಯುಸೂಕ್ತವು ಕೂಡ ಋಗ್ವೇದದ 10ನೇ ಮಂಡಲದಲ್ಲಿರುವ 83 ಹಾಗೂ 84ನೇ ಸೂಕ್ತಗಳು. ಒಟ್ಟು 14 ಮಂತ್ರಗಳನ್ನು ಒಳಗೊಂಡಿದೆ.

ಐತರೇಯೋಪನಿಷತ್, ದಶೋಪನಿಷತ್ತುಗಳಲ್ಲಿ ಪ್ರಥಮ ಉಪನಿಷತ್ತಾಗಿದ್ದು ಪರಬ್ರಹ್ಮನ ಬಳಿಗೆ ಹೋಗುವ ಸಾಧನವಾಗಿದೆ ಎಂದರು.

ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುವ ಉದ್ದೇಶದಿಂದ ಶ್ರಾವಣ ಮಾಸದ ಅಮವಾಸ್ಯೆಯಿಂದ 3 ದಿನಗಳ ಕಾಲ ಘನ ಪಾರಾಯಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಧುನಿಕ ಜೀವನ ಶೈಲಿಗೆ ಸಿಕ್ಕಿ ನೆಮ್ಮದಿ ಕಳೆದುಕೊಂಡಿರುವ ಜನರಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಶಾಂತಿ, ಸಮಾಧಾನ ತಂದುಕೊಡುತ್ತವೆ ಎಂದು ಹೇಳಿದರು.

ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀನಾರಯಣ ಭಟ್ಟ, ಪುಣೆಯ ಸ್ವಾನಂದ ಧಾಯಗುಡೆ, ಕಲ್ಯಾಣಪುರಿಯ ಸುಮುಖ ಭರಧ್ವಜ, ಹಾಸನದ ಕೃಷ್ಣಮೂರ್ತಿ ಘನಪಾಠಿ, ತೆಲಂಗಾಣದ ಚಿಂತಪಲ್ಲಿ ಉಮಾಶಂಕರ ಶರ್ಮಾ, ಯಶವಂತ ಕುಮಾರ ಶರ್ಮಾ, ಮಣಿಕಂಠ ಶರ್ಮಾ, ಆದಿತ್ಯ ಶರ್ಮಾ, ಶ್ರವಣ ಕುಮಾರ ಶರ್ಮಾ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net