

ಮೈಸೂರು: ಲೋಕಕಲ್ಯಾಣಾರ್ಥವಾಗಿ ದಸರಾ ವಸ್ತುಪ್ರದರ್ಶನ ಆವರಣದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೇವಾಭಕ್ತ ಮಂಡಳಿ ವತಿಯಿಂದ ಮಂಗಳವಾರ ಶ್ರೀರಾಮತಾರಕ ಹೋಮ ಮತ್ತು ಪವಮಾನ ಹೋಮವನ್ನು ಪೇಜಾವರ ಶ್ರೀಗಳ ಸಾನಿಧ್ಯದಲ್ಲಿ ಏರ್ಪಡಿಸಲಾಗಿತ್ತು.
ಶ್ರೀ ವೀರಾಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ತುಳಸಿ ಅಲಂಕಾರ, ಹನುಮಾನ್ ಚಾಲೀಸ್ ಪಾರಾಯಣ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಈ ಸಂದರ್ಭ ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಮಾತನಾಡಿ, ಬೆಳಗಿನ ಸಮಯದಲ್ಲಿ ಇಂತಹ ಪರಿಸರದಲ್ಲಿ ದೈನಂದಿನ ಪೂಜೆ, ಧ್ಯಾನ, ಪ್ರದಕ್ಷಿಣೆ, ಪ್ರಾರ್ಥನೆ ನೆರವೇರಿಸಿದ ಮಾನಸಿಕ ನೆಮ್ಮದಿ ದೊರೆಯುವ ಜತೆಗೆ ಆರೋಗ್ಯವೂ ವೃದ್ಧಿಸುತ್ತದೆ ಎಂದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೌಟಿಲ್ಯ ರಘು ಮಾತನಾಡಿ, ದೊಡ್ಡಕೆರೆ ದಡದಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ 182ವರ್ಷಗಳ ಹಿಂದೆಯೇ ಧಾರ್ಮಿಕ ಕಾರ್ಯಕ್ರಮಗಳು, ವಿವಾಹ, ನಾಮಕರಣ ಶುಭಸಮಾರಂಭಗಳು ನಡೆದುಕೊಂಡು ಬಂದಿದೆ. ಇಂತಹ ಕಾರ್ಯಕ್ರಮಗಳಿಗೆ ಮತ್ತೆ ಇಲ್ಲಿ ಅವಕಾಶ ದೊರೆಯಬೇಕು ಎಂದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಜಿ. ಗೌಡ, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಫನ್‌ವರ್ಲ್ಡ್ ಮುಖ್ಯಸ್ಥ ಮಲ್ಲಿಕಾರ್ಜುನ, ಪುರೋಹಿತ ಪ್ರಹಲ್ಲಾದ್ ರಾವ್, ಮುಡಾ ಸದಸ್ಯೆ ಲಕ್ಷ್ಮೀದೇವಿ, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.