

ಗೋಕರ್ಣ: ಇಲ್ಲಿನ ವಿವಿಧ ಮಂದಿರಗಳಲ್ಲಿ ಭಾನುವಾರ ಶ್ರೀರಾಮ ನವಮಿಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.ಇಲ್ಲಿನ ಬೇಲೆಕಾನು-ತದಡಿ-ಅಶೋಕೆ ಗ್ರಾಮದ ಅಳವಿ ಆಂಜನೇಯ ದೇವಾಲಯದಲ್ಲಿ ಎರಡು ದಿನ ವರ್ಧಂತಿ ಉತ್ಸವ ನಡೆಯಿತು. ಭಾನುವಾರ ಆನುವಂಶೀಯ ಅರ್ಚಕ ವೇ.ರಾಜಗೋಪಾಲ ಅಡಿ ಗುರೂಜಿ ಮತ್ತು ಕ್ಷೇತ್ರದ ವೈದಿಕರ ನೇತೃತ್ವದಲ್ಲಿ ಪವಮಾನ ಹವನ ಮತ್ತು ಪೂರ್ಣಾಹುತಿ ನೆರವೇರಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಆಂಜನೇಯ ಪಲ್ಲಕ್ಕಿ ಉತ್ಸವ ವಿಶೇಷ ಮೆರವಣಿಗೆಯಲ್ಲಿ ಸಾಂಗವಾಗಿ ಸಂಪನ್ನವಾಯಿತು. ಉತ್ಸವದ ನಿಮಿತ್ತ ಮಂದಿರಕ್ಕೆ ಬಗೆ ಬಗೆಯ ಪುಷ್ಪ ಮತ್ತು ವಿವಿಧ ಫಲಗಳಿಂದ ಅಲಂಕರಿಸಲಾಗಿತ್ತು. ಮಂದಿರದ ಶಿರೋಭಾಗದಲ್ಲಿರುವ ಹತ್ತು ಅಡಿ ಎತ್ತರದ ವಿಶಾಲ ಆಂಜನೇಯ ಮೂರ್ತಿ ಮತ್ತು ಸಂಪೂರ್ಣ ಮಂದಿರವನ್ನು ವಿದ್ಯುತ್ ದೀಪಗಳಿಂದ ಬೆಳಗಲಾಗಿತ್ತು.
ರಾಮ ಮಂದಿರದಲ್ಲಿ
ಸಮುದ್ರ ತೀರದ ಶ್ರೀರಾಮ ಮಂದಿರದಲ್ಲಿ ಪ್ರಾತಃಕಾಲದಿಂದ ಅಪಾರ ಭಕ್ತರು ರಾಮ-ಲಕ್ಷ್ಮಣ-ಸೀತಾ ಸಹಿತ ಆಂಜನೇಯ ಮೂರ್ತಿಗೆ ಪೂಜೆ ಕೈಗೊಂಡರು. ಶ್ರೀಹರಿಹರೇಶ್ವರ ವೇದವಿದ್ಯಾಪೀಠದ ಪ್ರಾಚಾರ್ಯ ವೇ. ಉದಯ ಮಯ್ಯರ್ ಮತ್ತು ವೇದವಿದರ ನೇತೃತ್ವದಲ್ಲಿ ವೈದಿಕವೃಂದದಿಂದ ಶ್ರೀರಾಮ ತಾರಕಜಪ ಸಹಿತ ವಿವಿಧ ಧಾರ್ಮಿಕ ಕಾರ್ಯಗಳನ್ನು ಸಂಘಟಿಸಲಾಯಿತು. ರಾಮ ಜನ್ಮೋತ್ಸವದ ನಿಮಿತ್ತ ದೇವಾಲಯವನ್ನು ಆಕರ್ಷಕವಾಗಿ ಶೃಂಗರಿಸಲಾಗಿತ್ತು.
ರಘೂತ್ತಮ ಮಠದಲ್ಲಿ
ಇಲ್ಲಿನ ಕೋಟಿತೀರ್ಥದಲ್ಲಿನ ರಾಮಚಂದ್ರಾಪುರ ಮಠದ ಶ್ರೀರಘೂತ್ತಮ ಮಠದಲ್ಲಿನ ಮಂದಿರದಲ್ಲಿ ರಾಮ ಜನನವನ್ನು ಪೂಜಾರಾಧನೆಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.