ಅನಾರೋಗ್ಯದಲ್ಲಿ ಪಾವಗಡ ಆಸ್ಪತ್ರೆ: ಮೂಲಸೌಕರ್ಯ ಕೊರತೆ

09 pvg 001
Published on

ಪಾವಗಡ: ದುರಸ್ತಿಗೊಳ್ಳದ ಶೌಚಗೃಹ, ಇದ್ದೂ ಇಲ್ಲದಂತಿರುವ ವೈದ್ಯಕೀಯ ಉಪಕರಣಗಳು, ಆಸ್ಪತ್ರೆ ಆವರಣದಲ್ಲೇ ದುರ್ನಾತ ಬೀರುತ್ತಿರುವ ಕಸದ ರಾಶಿ ಇವೆಲ್ಲ ಸಮಸ್ಯೆಗಳ ನಡುವೆ ವೈದ್ಯಕೀಯ ಸಿಬ್ಬಂದಿ ಕೊರತೆ..!


ಹೀಗೆ ಸಮಸ್ಯೆಗಳ ಪಟ್ಟಿ ಹೊಂದಿರುವ ಪಾವಗಡ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಚಿತ್ರಣವಿದು. ಆರೋಗ್ಯ ಸುಧಾರಣೆ ಮಾಡುವ ಆಸ್ಪತ್ರೆಯೇ ಅನಾರೋಗ್ಯ ಪರಿಸ್ಥಿತಿ ಎದುರಿಸುವಂತಾಗಿದೆ.


ಗಡಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದ್ದು, ತಾಲೂಕಿನ ಕೆಲವೆಡೆ ರೋಗಗಳು ಕಾಣಿಸಿಕೊಂಡಿವೆ. ರೋಗಿಗಳು ಚಿಕಿತ್ಸೆಗೆಂದು ತಾಲೂಕು ಆಸ್ಪತ್ರೆಗೆ ಬಂದರೆ ಇಲ್ಲಿನ ಅವ್ಯವಸ್ಥೆ ಹಾಗೂ ಸೂಕ್ತ ಚಿಕಿತ್ಸೆ ದೊರೆಯದೆ ನೆರೆ ರಾಜ್ಯ ಆಂಧ್ರದ ಮಡಕಶಿರ, ಪೆನುಗೊಂಡ, ಹಿಂದೂಪುರ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವಂತಾಗಿದೆ.

ಮೂಲಸೌಲಭ್ಯ ಕೊರತೆ: ಸಾರ್ವಜನಿಕ ಆಸ್ಪತ್ರೆಯಲ್ಲಿ 10 ವೈದ್ಯರಿದ್ದು ಒಂದು ಹುದ್ದೆ ಖಾಲಿಯಿದೆ. ಗರ್ಭಕೋಶ ಆಪರೇಶನ್‌ಗೆ ವ್ಯವಸ್ಥೆ ಇಲ್ಲ. ಎಕ್ಸ್‌ರೇ ವಿಭಾಗದವರು ವಾರಕ್ಕೆ ಮೂರು ದಿನ ಬರುತ್ತಾರೆ. ಆಸ್ಪತ್ರೆ ಹಳೆಯ ಕಟ್ಟಡದಲ್ಲಿದ್ದು ಯುಜಿಡಿ ಸಮಸ್ಯೆ ವೈದ್ಯರ
ನೆಮ್ಮದಿ ಕಸಿದಿದೆ. ಆಸ್ಪತ್ರೆಗೆ ಪ್ರತ್ಯೇಕ ಸಿವೆಜ್ ಟ್ರೀಟ್‌ಮೆಂಟ್ ಪ್ಲಾಂಟ್ ಹಾಗೂ ಸಿಟಿ ಸ್ಕಾೃನ್ ಯಂತ್ರದ ಅಗತ್ಯವಿದೆ. ಶಸಚಿಕಿತ್ಸೆ ಹಾಗೂ ಒಪಿಡಿ ಕೊಠಡಿಯೂ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ.

ಸ್ವಚ್ಛತೆ ಇಲ್ಲ: ಆಸ್ಪತ್ರೆ ಎಂದರೆ ಸ್ವಚ್ಛತೆಯಿಂದ ಕೂಡಿರುತ್ತದೆ ಎಂಬ ಮಾತಿಗೆ ವಿರುದ್ಧವಾಗಿರುವ ತಾಲೂಕು ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ನೈರ್ಮಲ್ಯದ ಕೊರತೆ ಇದೆ. ಜನರಲ್ ವಾರ್ಡ್‌ನ ಶೌಚಗೃಹ ನಿರ್ವಹಣೆ ಇಲ್ಲದೆ ನಾರುತ್ತಿದೆ. ಅದಕ್ಕೆ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ರೋಗಿಗಳು ಶೌಚಗೃಹ ಕೊಠಡಿ ಮುಂಭಾಗದಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡಿ ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದ್ದಾರೆ. ಇನ್ನು ಆಸ್ಪತ್ರೆ ಮುಂಭಾಗದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವ ಬಗ್ಗೆ ಯಾವ ಕ್ರಮ ವಹಿಸಿಲ್ಲ.


ಲಂಚಾವತಾರ: ಸಾರ್ವಜನಿಕ ಆಸ್ಪತ್ರೆಗೆ ಅನೇಕ ಸೌಲಭ್ಯಗಳಿಗೆ ಬೇಕಾಗಿರುವ ವಯಸ್ಸಿನ ಪತ್ರ, ಆರೋಗ್ಯ ದೃಢೀಕರಣ ಪತ್ರ, ಮುಂತಾದ ಸರ್ಟಿಫಿಕೇಟ್ಗಳಿಗೆ ನಾಗರಿಕರು ಲಂಚ ಕೊಟ್ಟರೆ ಮಾತ್ರ ಸರ್ಟಿಫಿಕೇಟ್ ಕೊಡುತ್ತಾರೆ ಎಂಬುದು ಸಾರ್ವಜನಿಕರ ಆೂೋಪ.

ಆಸ್ಪತ್ರೆಯ ಮೂಲಸೌಲಭ್ಯಗಳ ಕೊರತೆ ನೋಡಿ ಸಾರ್ವಜನಿಕರು ಚಿಕಿತ್ಸೆಗೆ ಬರುವುದು ವಿರಳವಾಗಿದೆ. ಮಕ್ಕಳಿಗಾಗಿ 10 ಹಾಸಿಗೆ ಮೀಸಲಿದ್ದರೂ ಸಾಂಕ್ರಾಮಿಕ ರೋಗ ಭೀತಿ ಇರುವಾಗ ಯಾರೊಬ್ಬರೂ ಚಿಕಿತ್ಸೆ ಪಡೆಯುತ್ತಿಲ್ಲ. ಹಾಸಿಗೆಗಳು ಹಾಗೆಯೇ ಖಾಲಿಯಾಗಿಯೇ ಉಳಿದಿವೆ.

ತಾಲೂಕು ಆಸ್ಪತ್ರೆಗೆ ಆರೋಗ್ಯ ಇಲಾಖೆಯಿಂದ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆಯೋ ಗೊತ್ತಿಲ್ಲ. ಶೌಚಗೃಹದ ಸ್ಥಿತಿ ನೋಡಿದರೆ ಆಸ್ಪತ್ರೆಯತ್ತ ಮುಖ ಮಾಡದಿರುವುದು ಒಳ್ಳೆಯದು ಅನಿಸುತ್ತದೆ. ಈ ಸಮಸ್ಯೆಗಳನ್ನು ತಾಲೂಕು ಆರೋಗ್ಯಾಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕು.

- ಹನುಮಂತರಾಯಪ್ಪ ಕಡಪಲಕೆರೆ ನಿವಾಸಿ

ತಾಲೂಕು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಈವರೆಗೂ ನನ್ನ ಗಮನಕ್ಕೆ ಯಾರು ತಂದಿಲ್ಲ. ಆಸ್ಪತ್ರೆಯ ಡಾ.ಕಿರಣ್ ಅವರಿಗೆ ನಿರ್ವಹಣಾ ಜವಾಬ್ದಾರಿ ಇದೆ. ಈ ಬಗ್ಗೆ ಅವರ ಗಮನಕ್ಕೆ ತಂದು ಕೂಡಲೇ ಸಮಸ್ಯೆ ಪರಿಹರಿಸಲಾಗುವುದು.
-ತಿರುಪತಯ್ಯ, ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net