ಪವಾಡ ಯೋಗಿ ಯಚ್ಚರೇಶ್ವರ ಮಹಾ ರಥೋತ್ಸವ

JAATRE
Published on

ಹೊಳೆಆಲೂರ: ಗ್ರಾಮದ ಪವಾಡ ಯೋಗಿ, ಸರ್ವ ಧರ್ಮಗಳ ಆರಾದ್ಯ ದೇವರು ಶ್ರೀಯಚ್ಚರೇಶ್ವರ ಸ್ವಾಮಿಗಳ ಮಹಾ ರಥೋತ್ಸವ ಶುಕ್ರವಾರ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಅಲಂಕಾರ ಪೂಜೆ, ಮಹಾ ಮಂಗಳಾರತಿ ಜರುಗಿತು. ಪ್ರಸಾದ ನಿಲಯ ಲೋಕಾರ್ಪಣೆ ಮಾಡಲಾಯಿತು. ಮಧ್ಯಾಹ್ನ 1 ಗಂಟೆಗೆ ಗ್ರಾಮದ ಆಟೋ ಚಾಲಕರ ಸಂಘ, ಮೇಘರಾಜ ನಗರದ ಭಕ್ತರಿಂದ ಬೃಹತ್ ಗಾತ್ರದ ರುದ್ರಾಕ್ಷಿ ಮಾಲೆ ರಥಕ್ಕೆ ಅರ್ಪಿಸಲಾಯಿತು.

ಸಂಜೆ 4 ಗಂಟೆಗೆ ಹುಲ್ಲೂರ ಗ್ರಾಮದ ಸಕಲ ಸದ್ಭಕ್ತರಿಂದ ಹಳಿ ಬಂಡಿಯಲ್ಲಿ ತೇರಿನ ಹಗ್ಗ ಹಾಗೂ ಬಸವಣ್ಣ ದೇವರ ಮೂರ್ತಿಯನ್ನು ಡೊಳ್ಳು ಭಜನೆ ಸೇರಿದಂತೆ ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಯಚ್ಚರೇಶ್ವರ ದೇವಸ್ಥಾನಕ್ಕೆ ತರಲಾಯಿತು. ನಂತರ ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವದ ನಂತರ ಮಹಾ ರಥೋತ್ಸವ ಜರುಗಿತು.

ಯಚ್ಚರೇಶ್ವರ ಶ್ರೀಗಳು ನರಗುಂದ ಪುಣ್ಯಾರಣ್ಯ ಪತ್ರಿವನ ಮಠದ ಡಾ. ಶ್ರೀಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಶಿರೋಳ ಯಚ್ಚರೇಶ್ವರ ಮಠದ ಅಭಿನವ ಯಚ್ಚರಸ್ವಾಮಿಗಳು, ಉಳವೇಂದ್ರ ಮಠದ ಅಲಮಯ್ಯ ಸ್ವಾಮೀಜಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಸ್ತೆಯ ಎರಡು ಬದಿಯಲ್ಲಿ ನಿಂತ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net